ಗಂಗಾವತಿ (ಕೊಪ್ಪಳ): ಈಗ ಯಾರೆಲ್ಲ ಗಲಾಟೆ ಮಾಡುತ್ತಾರೋ ಅವರ ಹೆಸರು ಬರೆದಿಟ್ಟುಕೊಳ್ಳಿ ಎಂದು ಮತದಾನದ ಬಳಿಕ ಮಾಜಿ ಸಚಿವ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ ಅಧ್ಯಕ್ಷ ಗಾಲಿ ಜನಾರ್ದನ ರೆಡ್ಡಿ ಬಿಜೆಪಿ, ಕಾಂಗ್ರೆಸ್ ಕಾರ್ಯಕರ್ತರತ್ತ ಬೆರಳು ತೋರಿಸಿ ಹೇಳಿದ ಮಾತು ವೈರಲ್ ಆಗಿದೆ. ಇಲ್ಲಿನ ಎಪಿಎಂಸಿಯ ಮತಗಟ್ಟೆಯಲ್ಲಿ ರೆಡ್ಡಿ ಬೆಂಬಲಿತ ಏಜಂಟರು ಕೆಆರ್ಪಿಪಿ ಪಕ್ಷದ ಶಾಲು ಮತ್ತು ರೆಡ್ಡಿಯ ಹೆಸರಿನ ಬ್ಯಾಡ್ಜ್ ಧರಿಸಿ ಕುಳಿತಿದ್ದರು. ಇದಕ್ಕೆ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರು ತೀವ್ರ ವಿರೋಧ ವ್ಯಕ್ತಪಡಿಸಿದರು. ಘಟನೆಗೆ ಸಂಬಂಧಿಸಿದಂತೆ ಕೆಲಕಾಲ ಮತಗಟ್ಟೆಯ ಆವರಣದಲ್ಲಿಯೇ ಕೆಆರ್ಪಿಪಿ ಬೆಂಬಲಿತ ಕಾರ್ಯಕರ್ತರು ಹಾಗು ಬಿಜೆಪಿ - ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಮಾತಿನ ಚಕಮಕಿ ನಡೆಯಿತು.
ಮಾಹಿತಿ ತಿಳಿಯುತ್ತಿದ್ದಂತೆ ಕಾಂಗ್ರೆಸ್ ಅಭ್ಯರ್ಥಿ ಇಕ್ಬಾಲ್ ಅನ್ಸಾರಿ ಸಹೋದರ ಅಖ್ತರ್ ಅನ್ಸಾರಿ ಸ್ಥಳಕ್ಕೆ ಆಗಮಿಸಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಒಟ್ಟುಗೂಡಿ ಮತಗಟ್ಟೆಯೊಳಗೆ ಪ್ರವೇಶಿಸಿ ಮತಗಟ್ಟೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಚುನಾವಣಾ ನೀತಿಗಳನ್ನು ಉಲ್ಲಂಘಿಸಿ ಹೇಗೆ ಕೆಆರ್ಪಿಪಿ ಪಕ್ಷದ ಕಾರ್ಯಕರ್ತರಿಗೆ ಚಿಹ್ನೆ, ಶಾಲು ಬಳಸಲು ಅವಕಾಶ ಮಾಡಿಕೊಟ್ಟಿದ್ದೀರಿ ಎಂದು ಪ್ರಶ್ನಿಸಿದ್ದಾರೆ. ಇದು ಮತಗಟ್ಟೆಯೊಳಗೆ ಮಾತಿನ ಚಕಮಕಿಗೆ ಕಾರಣವಾಗಿದ್ದು, ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಮತಗಟ್ಟೆ ಅಧಿಕಾರಿಗಳು ನೀವು ರೆಡ್ಡಿಗೆ ಬುಕ್ ಆಗಿದ್ದೀರಿ ಎಂದು ಅಖ್ತರ್ ಅನ್ಸಾರಿ ನೇರವಾಗಿ ಟೀಕೆ ಮಾಡಿದರು.
ಸ್ಥಳಕ್ಕೆ ದೌಡಾಯಿಸಿದ ರೆಡ್ಡಿ: ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ದೌಡಾಯಿಸಿದ ಜನಾರ್ದನ ರೆಡ್ಡಿ ಸಮ್ಮುಖದಲ್ಲಿಯೇ ಕಾಂಗ್ರೆಸ್ - ಬಿಜೆಪಿ ಕಾರ್ಯಕರ್ತರು ಒಂದಾಗಿ ಕೆಆರ್ಪಿಪಿ ನಾಯಕರ ಮೇಲೆ ಮುಗಿ ಬಿದ್ದಿದ್ದಾರೆ. ಸಮಾಧಾನಪಡಿಸಲು ಆಗಮಿಸಿದ್ದ ರೆಡ್ಡಿ ಕಾರು ಇಳಿಯುತ್ತಿದ್ದಂತೆಯೇ ಕಾರ್ಯಕರ್ತರ ಮಾತಿನ ಚಕಮಕಿ ಜೋರಾಗಿತ್ತು. ಈ ರೆಡ್ಡಿ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಮುಖ್ಯವಾಗಿ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಇದನ್ನು ಟೀಕಿಸಿ ಟ್ರೋಲ್ ಮಾಡುತ್ತಿದ್ದಾರೆ.
ಗಂಗಾವತಿಯಲ್ಲಿ ಮತದಾನ: ಸೋಮವಾರ ನಡೆದ ವಿಧಾನಸಭಾ ಚುನಾವಣೆಯಲ್ಲಿ ಗಂಗಾವತಿ ಮತ ಕ್ಷೇತ್ರದಿಂದ ಸ್ಪರ್ಧಿಸಿರುವ ವಿವಿಧ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು, ಮಾಜಿ, ಹಾಲಿ ಶಾಸಕ - ಸಚಿವರು ನಗರದ ವಿವಿಧ ಮತಗಟ್ಟೆಗಳಲ್ಲಿ ಮತದಾನ ಮಾಡಿದರು. ಬಿಜೆಪಿ ಅಭ್ಯರ್ಥಿ ಹಾಗೂ ಹಾಲಿ ಶಾಸಕ ಪರಣ್ಣ ಮುನವಳ್ಳಿ ಟಿಎಪಿಸಿಎಂಎಸ್ ಮತಗಟ್ಟೆಯಲ್ಲಿ, ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಗಂಗಾವತಿ ಅಭ್ಯರ್ಥಿ ಜಿ. ಜನಾರ್ದನ ರೆಡ್ಡಿ ಕನಕಗಿರಿ ರಸ್ತೆಯಲ್ಲಿರುವ ಉಗ್ರಾಣ ನಿಗಮದ ಆವರಣದಲ್ಲಿ ಸ್ಥಾಪಿಸಲಾಗಿದ್ದ ಮತಗಟ್ಟೆಯಲ್ಲಿ ಮತದಾನ ಮಾಡಿದರು. ಕಾಂಗ್ರೆಸ್ ಅಭ್ಯರ್ಥಿ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಗಂಜ್ ಪ್ರದೇಶದ ಎಪಿಎಂಸಿಯ ಮತಗಟ್ಟೆಯಲ್ಲಿ ಜೆಡಿಎಸ್ ಅಭ್ಯರ್ಥಿ ಎಚ್.ಆರ್.ಚನ್ನಕೇಶವ ತಮ್ಮ ಕುಟುಂಬ ಸಮೇತ ಆಗಮಿಸಿ ಕೆಇಬಿ ಮತಗಟ್ಟೆಯಲ್ಲಿ ಮತ ಹಾಕಿದರು.
ಹಿರಿಯರ ಮತದಾನ: 70 ವರ್ಷ ವಯೋಮಿತಿ ಮೀರಿದವರಿಗೆ ಮತ್ತು ಅನಾರೋಗ್ಯದಿಂದ ಬಳಲುತ್ತಿದ್ದವರಿಗೆ ಈ ಬಾರಿ ಮನೆಯಿಂದಲೇ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದ್ದರೂ ಕೂಡ ಕೆಲ ಹಿರಿಯರು ತಮ್ಮ ಕುಟುಂಬ ಸದಸ್ಯರ ನೆರವಿನೊಂದಿಗೆ ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿದರು. ಮತಗಟ್ಟೆ 155 ರಲ್ಲಿ ರಾಮಣ್ಣ ಮಡಿವಾಳ ಎಂಬ 90 ವರ್ಷ ವಯೋವೃದ್ಧ ಊರುಗೋಲಿನ ಸಹಾಯದಿಂದ, ಮೊಮ್ಮಗಳು ಲತಾಶ್ರೀ ಹಾಗೂ ಮಗಳು ಶೋಭಾ ಅವರ ನೆರವಿನೊಂದಿಗೆ ಆಗಮಿಸಿ ಮತಗಟ್ಟೆಯಲ್ಲಿ ಮತ ಹಾಕಿದರು. ಇಲ್ಲಿನ ಬಸವಣ್ಣ ವೃತ್ತದ ಸಮೀಪದ ಮತಗಟ್ಟೆ 131ರಲ್ಲಿ ಪಂಪಮ್ಮ ಎಂಬ ವಯೋವೃದ್ಧೆ ವೀಲ್ಚೇರ್ಲ್ಲಿ ಕುಳಿತುಕೊಂಡೇ ಬಂದು ವೋಟ್ ಮಾಡಿದರು. ಪಂಪಮ್ಮ ಅವರಿಗೆ ನಾಲ್ವರು ಮೊಮ್ಮಕ್ಕಳು ಸಾಥ್ ನೀಡಿದ್ದು ಗಮನ ಸೆಳೆಯಿತು.
ಮತದಾರರ ಪಟ್ಟಿಯಿಂದ ಕೈ ಬಿಟ್ಟ ಘಟನೆ: ಬಿಜೆಪಿಯ ಹಾಲಿಶಾಸಕ ಪರಣ್ಣ ಮುನವಳ್ಳಿ ಅವರ ಮಾಜಿ ಆಪ್ತ ಕಾರ್ಯದರ್ಶಿ ಹಾಗೂ ಹಾಲಿ ಸರ್ಕಾರಿ ಶಾಲೆಯ ಶಿಕ್ಷಕ ಚನ್ನಬಸವಸ್ವಾಮಿ ಎಂಬ ಮತದಾರರನ್ನು ಪಟ್ಟಿಯಿಂದ ಕೈಬಿಟ್ಟ ಘಟನೆ ನಗರದ ವಾರ್ಡ್ ನಂಬರ್ 20 ರ ಮುದ್ಗಲ್ ಓಣಿಯಲ್ಲಿ ಬೆಳಕಿಗೆ ಬಂದಿದೆ. ಬೀದರ್ ಜಿಲ್ಲೆಯ ಕಮಲಾನಗರ ತಾಲೂಕಿನ ಚವರದಾಬಕಾ ಎಂಬ ಗ್ರಾಮದಲ್ಲಿ ಸರ್ಕಾರಿ ಶಾಲೆಯ ಶಿಕ್ಷಕರಾಗಿ ಚನ್ನಬಸವಸ್ವಾಮಿ ಕರ್ತವ್ಯ ನಿರ್ವಹಿಸುತ್ತಿದ್ದು, ಮತದಾನ ಮಾಡುವ ಉದ್ದೇಶಕ್ಕೆ ಪತ್ನಿ ಅವರೊಂದಿಗೆ ಮತಗಟ್ಟೆಗೆ ಬಂದಾಗ ಮತದಾರರ ಪಟ್ಟಿಯಿಂದ ಹೆಸರು ಕೈಬಿಟ್ಟಿದ್ದು ಬೆಳಕಿಗೆ ಬಂದಿದೆ. ನಾನು ಪ್ರತಿ ಬಾರಿಯೂ ನಗರಸಭೆ, ತಾಲೂಕು, ಜಿಲ್ಲಾ, ವಿಧಾನಸಭಾ, ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಗಂಗಾವತಿಗೆ ಬಂದು ಮತದಾನ ಮಾಡುತ್ತೇನೆ. ನನ್ನ ಲಿಖಿತ ಮನವಿ ಇಲ್ಲದೇ ನನ್ನ ಹೆಸರು ತೆಗೆದು ಹಾಕಿರುವ ಬಗ್ಗೆ ಸಂಬಂಧಿತರಿಗೆ ದೂರು ನೀಡಿರುವುದಾಗಿ ಚನ್ನಬಸವಸ್ವಾಮಿ ತಿಳಿಸಿದ್ದಾರೆ.
ಮೊದಲ ಮತದಾನ: ಹದಿನೆಂಟು ವರ್ಷ ತುಂಬಿದ ಮತ್ತು ಇದೇ ಮೊದಲ ಬಾರಿಗೆ ಮತದಾನದ ಹಕ್ಕು ಪಡೆದುಕೊಂಡ ನೂರಾರು ಯುವಕರು ಉತ್ಸಾಹದಿಂದಲೇ ಮತಗಟ್ಟೆಗಳಿಗೆ ಆಗಮಿಸಿ ಮತದಾನ ಮಾಡಿದರು. ಕನಕಗಿರಿ ವಿಧಾನಸಭಾ ಕ್ಷೇತ್ರದ ಶ್ರೀರಾಮನಗರದ ನಾಲ್ಕನೇ ವಾರ್ಡ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇದೇ ಮೊದಲ ಬಾರಿಗೆ ಮತದಾನ ಮಾಡಿದ ಚೇತನ್ ಕುಮಾರ್ ಮುದ್ಗಲ್ ಎಂಬ ಯುವಕ ಮಾತನಾಡಿ, ಪ್ರಜಾಪ್ರಭುತ್ವದ ಉಳಿವಿಗೆ, ಬಲಪಡಿಸಲು ಕಡ್ಡಾಯವಾಗಿ ಮತದಾನ ಮಾಡಿ. ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಎಂದು ಸಂದೇಶ ನೀಡಿದರು.
ಇದನ್ನೂ ಓದಿ: ತೋರಿಸಿದ ಚಿಹ್ನೆಗೆ ಅಧಿಕಾರಿಗಳು ಮತ ಹಾಕಿಲ್ಲ ಎಂದು ಆರೋಪಿಸಿ ಧರಣಿ ಕುಳಿತ 85ರ ವೃದ್ಧೆ!