ಗಂಗಾವತಿ: ತಮ್ಮ ರಾಜಕೀಯ ನಡೆಯ ಬಗ್ಗೆ ಕುತೂಹಲ ಕಾಯ್ದಿಟ್ಟುಕೊಂಡಿರುವ ಮಾಜಿ ಸಚಿವ ಜಿ.ಜನಾರ್ದನ ರೆಡ್ಡಿ, ಇಂದು ನಗರದ ಮಠ, ಮಂದಿರ, ದರ್ಗಾಗಳಿಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ದರ್ಗಾವೊಂದಕ್ಕೆ ಆರು ಕೋಟಿ ರೂಪಾಯಿ ದೇಣಿಗೆ ನೀಡಿರುವ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.
ಇಲ್ಲಿನ ಪೀರಜಾಧೆ ರಸ್ತೆಯಲ್ಲಿರುವ ಖಲಿಲುಲ್ಲಾ ಖಾದ್ರಿ ದರ್ಗಾಕ್ಕೆ ರೆಡ್ಡಿ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿನ ಗುರುಗಳು, ಶತಮಾನಗಳ ಕಾಲದ ಇತಿಹಾಸ ಹೊಂದಿರುವ ಈ ದರ್ಗಾದ ನವೀಕರಣ ಕೈಗೊಳ್ಳಲಾಗುತ್ತಿದೆ ಎಂದು ಕಟ್ಟಡದ ನಕಾಶೆ ತೋರಿಸಿದ್ದರು. ಈ ವೇಳೆ ರೆಡ್ಡಿ ದರ್ಗಾಕ್ಕೆ ಉದಾರ ದೇಣಿಗೆ ನೀಡಿದ್ದರು ಎನ್ನುವ ಮಾತುಗಳು ಕೇಳಿಬಂದಿದ್ದವು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಮುಸ್ಲಿಂ ಸಮಾಜದ ಹಿರಿಯ ಮುಖಂಡ ಸೈಯದ್ ಅಲಿ, ದರ್ಗಾದ ಕಟ್ಟಡ ನಿರ್ಮಾಣದ ಬಗ್ಗೆ ಅಲ್ಲಿನ ಗುರುಗಳು ರೆಡ್ಡಿ ಅವರ ಗಮನಕ್ಕೆ ತಂದಿದ್ದಾರೆ. ಸುಮಾರು ಆರು ಕೋಟಿ ಮೊತ್ತದಲ್ಲಿ ದರ್ಗಾ, ಸಮುದಾಯ ಭವನ ನಿರ್ಮಾಣಕ್ಕೆ ಯೋಜನೆ ರೂಪಿಸಿದ್ದಾಗಿ ಗುರುಗಳು ತಿಳಿಸಿದ್ದಾರೆ.
ಕಟ್ಟಡದ ಮಾಹಿತಿ ಪಡೆದುಕೊಂಡ ರೆಡ್ಡಿಯವರು ಒಂದು ಪ್ರತಿಯನ್ನು ಪಡೆದುಕೊಂಡು ಅದರ ಮೇಲೆ ಸಹಿ ಮಾಡಿ ತಮ್ಮ ಆಪ್ತ ಅಲಿಖಾನನಿಗೆ ಇಟ್ಟುಕೊಳ್ಳುವಂತೆ ಹೇಳಿದರು. ಇದನ್ನೇ ಆರು ಕೋಟಿ ಹಣ ನೀಡಲಾಗಿದೆ ಎಂದು ಸುದ್ದಿ ಹರಿಬಿಡಲಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ: ಸವದತ್ತಿ ಯಲ್ಲಮ್ಮ ದೇವಿ ದರ್ಶನ ಪಡೆದ ಸಿಎಂ ಬೊಮ್ಮಾಯಿ