ಕೊಪ್ಪಳ: ಪರೀಕ್ಷಾ ಶುಲ್ಕ ಪಾವತಿಸಲು ಕಾಲಾವಕಾಶ ನೀಡದಿರುವುದನ್ನು ಖಂಡಿಸಿದ ಐಟಿಐ ವಿದ್ಯಾರ್ಥಿಗಳು ಎಐಡಿವೈಒ ಸಂಘಟನೆ ನೇತೃತ್ವದಲ್ಲಿ ನಗರದ ಜಿಲ್ಲಾಡಳಿತ ಭವನದ ಮುಂದೆ ಪ್ರತಿಭಟಿಸಿದ್ದಾರೆ.
ನಗರದಲ್ಲಿ ಮಾತನಾಡಿದ ಸಂಘಟನೆ ಮುಖಂಡ ಶರಣು ಗಡ್ಡಿ, ಕೋವಿಡ್ -19 ಕಾರಣದಿಂದಾಗಿ ಐಟಿಐ ವಿದ್ಯಾರ್ಥಿಗಳು ಸುಮಾರು 10 ತಿಂಗಳು ತರಬೇತಿ ಕಳೆದುಕೊಂಡಿದ್ದಾರೆ. ಹೀಗಾಗಿ, ನವದೆಹಲಿಯ ಡಿಜಿಇಟಿ ಐಟಿಐನ ಮೊದಲ ವರ್ಷದ ತರಬೇತುದಾರ ವಿದ್ಯಾರ್ಥಿಗಳಿಗೆ ಪರೀಕ್ಷೆಯಿಂದ ವಿನಾಯಿತಿಯನ್ನು ನೀಡಿದೆ. ಆದರೆ, ಕೈಗಾರಿಕಾ ಪರೀಕ್ಷಾ ದಿನಾಂಕ ಪ್ರಕಟಿಸಿ ಫೆ. 17 ರೊಳಗಾಗಿ ಪರೀಕ್ಷಾ ಶುಲ್ಕ ಪಾವತಿಸಲು ಆದೇಶ ಮಾಡಿದೆ. ಇದು ವಿದ್ಯಾರ್ಥಿಗಳಲ್ಲಿ ಆತಂಕ ಸೃಷ್ಟಿಸಿದೆ. ಈ ಎರಡು ಆದೇಶಗಳು ಪರಸ್ಪರ ಒಂದಕ್ಕೊಂದು ತದ್ವಿರುದ್ಧವಾಗಿವೆ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.
ಓದಿ: ದೇಣಿಗೆ ಕೊಟ್ಟುವರು-ಕೊಡದವರ ಮನೆಗಳಿಗೂ ಮಾರ್ಕ್ ಮಾಡಿಲ್ಲ: ಬಿಜೆಪಿ ಮುಖಂಡ ಅಶ್ವತ್ಥ್ ನಾರಾಯಣ್
ವಿದ್ಯಾರ್ಥಿಗಳ ಶುಲ್ಕ ಪಾವತಿಗೆ ಕನಿಷ್ಠ ಕಾಲಾವಕಾಶ ನೀಡದೇ ಇರುವುದು ಅಸಮಂಜಸ ನಡೆಯಾಗಿದೆ. ಒಂದೇ ದಿನದಲ್ಲಿ ಶುಲ್ಕವನ್ನು ಪಾವತಿಸಲು ಹೇಗೆ ಸಾಧ್ಯ. ತಕ್ಷಣದಲ್ಲಿ ಶುಲ್ಕಪಾವತಿ ಮಾಡಲು ಸಾಧ್ಯವಾಗದ ವಿದ್ಯಾರ್ಥಿಗಳು ತರಬೇತಿ ಶಿಕ್ಷಣದಿಂದ ದೂರ ಉಳಿಯುವಂತಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ತದ್ವಿರುದ್ಧವಾಗಿರುವ ನಿದೇರ್ಶನಗಳನ್ನು ಬದಲಿಸಬೇಕು ಮತ್ತು ಏಕಾಏಕಿ ಪರೀಕ್ಷೆ ಶುಲ್ಕ ಪಾವತಿಸಲು ಹೊರಡಿಸಿರುವ ಅಧಿಸೂಚನೆ ಹಿಂಪಡೆಯಬೇಕು. ಹಿಂದಿನ ಆದೇಶದಂತೆ ಕೊರೊನಾ ಹಿನ್ನೆಲೆಯಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳನ್ನು ದ್ವಿತೀಯ ವರ್ಷಕ್ಕೆ ಉನ್ನತೀಕರಿಸಬೇಕು ಎಂದು ಆಗ್ರಹಿಸಿದರು.