ಕುಷ್ಟಗಿ : ಕನ್ನಡ ಸಾಹಿತ್ಯ ಪರಿಷತ್ ಮೂಲ ತತ್ವ, ಉದ್ದೇಶ ಹಾಗೂ ಸ್ವರೂಪಕ್ಕೆ ಯಾವುದೇ ರೀತಿಯ ವ್ಯತ್ಯಯ ಆಗದ ರೀತಿಯಲ್ಲಿ ಇದ್ದ ನಿಯಮಗಳನ್ನು ವಿಸ್ತರಿಸಿ, ಸೇರಿಸಿ ಮಾರ್ಪಾಡು ಮಾಡಲಾಗಿದೆ ಎಂದು ಕಸಾಪ ಬೈಲಾ ತಿದ್ದುಪಡಿ ಸಮಿತಿ ಅಧ್ಯಕ್ಷ, ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿ ಅರಳಿ ನಾಗರಾಜ ಹೇಳಿದ್ದಾರೆ.
ಕುಷ್ಟಗಿ ಹಳೆಯ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಸಾಪ ಬೈಲಾದಲ್ಲಿ ಮೂಲ ನಿಬಂಧನೆಗಳನ್ನು ವಿಸ್ತರಿಸಲಾಗಿದೆ ಹೊರತು ತೆಗೆದು ಹಾಕಿಲ್ಲ. ಸದರಿ ಬೈಲಾ ತಿದ್ದುಪಡಿ ವೇಳೆ ತೆಗೆದು ಹಾಕಿದ್ದು ಕಡಿಮೆ ಸೇರಿಸಿದ್ದು ಹೆಚ್ಚು ಎಂದ ಅವರು, ಯಾವುದು ಅಗತ್ಯವಿಲ್ಲವೋ ಅದನ್ನು ತೆಗೆದು ಹಾಕಿದ್ದೇವೆ ಹೊರತು ಅಗತ್ಯವಿರುವ ಇದ್ದ ನಿಯಮಗಳನ್ನು ತೆಗೆಯಲು ಹೋಗಿಲ್ಲ ಎಂದು ಸ್ಪಷ್ಟಪಡಿಸಿದರು.
ಕನ್ನಡ ನುಡಿ ಪತ್ರಿಕೆಯನ್ನು ಪ್ರತಿ ಅಜೀವ ಸದಸ್ಯರಿಗೆ ಪುಕ್ಕಟೆಯಾಗಿ ನೀಡಲಾಗುತ್ತಿತ್ತು. ಒಂದೇ ಮನೆಯಲ್ಲಿ ನಾಲ್ಕೈದು ಸದಸ್ಯರಿದ್ದರೆ ನಾಲ್ಕೈದು ಪುಸ್ತಕ ಪ್ರತಿಗಳು ಕಳುಹಿಸಲಾಗುತ್ತಿತ್ತು. ಅಷ್ಟು ಸಾಹಿತ್ಯ ಪರಿಷತ್ಗೆ ಆರ್ಥಿಕ ಹೊರೆಯಾಗುತ್ತಿತ್ತು. ಇದರ ಬದಲಿಗೆ ಕನ್ನಡ ನುಡಿ ವೆಬ್ಸೈಟ್ಗೆ ಹಾಕಿದರೆ ಅದರಲ್ಲಿ ಓದಲು ಸಾಧ್ಯವಾಗುತ್ತಿದೆ. ಮುದ್ರಿತ ಪ್ರತಿಗಳನ್ನು ಬೇಡಿಕೆ ಸಲ್ಲಿಸಿದವರಿಗೆ ವಾರ್ಷಿಕ ಚಂದಾ ನಿಗದಿಪಡಿಸಿ ಕನ್ನಡ ನುಡಿ ಪತ್ರಿಕೆ ಕಳುಹಿಸಲಾಗುವುದು. ಇಲ್ಲಿ ಮುದ್ರಿತ ಪ್ರತಿಗೂ ಅವಕಾಶ, ಡಿಜಿಟಲ್ ಪ್ರತಿಗೂ ಅವಕಾಶ ನೀಡಲಾಗಿದೆ ಎಂದರು.
ಬೇರೆ ಭಾಷೆಗಳಿಂದ ಕನ್ನಡ ಬೆಳೆಯಬೇಕು : ಇಂಗ್ಲಿಷ್ ಎಲ್ಲ ಭಾಷೆಗಳ ಶಬ್ದಗಳನ್ನು ತನ್ನದೇ ಮಾಡಿಕೊಂಡು ಬೆಳೆದಿದೆ. ರಿಟ್ ಎನ್ನುವುದು ಇಂಗ್ಲೀಷ್ ಭಾಷೆಯ ಪದ ಅಲ್ಲ. ಬೇರೆ ಭಾಷೆಯಿಂದ ತೆಗೆದುಕೊಂಡಿದೆ. ಡ್ರೈವರ್ಗಳನ್ನು ಯಾರನ್ನೇ ಕೇಳಿ ಕ್ಲಚ್, ಸ್ಟೇರಿಂಗ್, ಬ್ರೇಕ್, ಎಕ್ಸಲೇಟರ್ ಎಂದು ಇಂಗ್ಲಿಷ್ ಪದ ಬಳಸುತ್ತಾರೆ. ಇದನ್ನೇ ಕನ್ನಡದಲ್ಲಿ ಹೇಳಿ ಎಂದರೆ ಗೊತ್ತಿಲ್ಲ. ಉರ್ದು ಭಾಷೆಯ, ತಮಿಳು ಭಾಷೆಯ ಡ್ರೈವರ್ಗೂ ತಮ್ಮದೇ ಭಾಷೆಯಲ್ಲಿ ಈ ಪದ ಗೊತ್ತಿಲ್ಲ. ಬಾಲಬೇರಿಂಗ್, ಸಾಪ್ಟಿಂಗ್, ಗೇರ್, ಲೀವರ್, ಬಸ್, ಪೆಟ್ರೋಲ್, ಡೀಸೆಲ್ ಇವೆಲ್ಲಾ ಕನ್ನಡ ಭಾಷೆಯಾಗಿ ಬದಲಾಗಿವೆ. ಕನ್ನಡ ಭಾಷೆ ಬೆಳೆಯಲು ನಿತ್ಯೋಪಯೋಗಿ ಅನ್ಯ ಭಾಷೆಯ ಪದಗಳನ್ನು ಬಳಸುವುದು ಅನಿವಾರ್ಯ ಆಗಿದೆ ಎಂದರು.
ಇದನ್ನೂ ಓದಿ: ಉಪ ಲೋಕಾಯುಕ್ತರಾಗಿ ಪ್ರಮಾಣ ವಚನ ಸ್ವೀಕರಿಸಿದ ನ್ಯಾ. ಫಣೀಂದ್ರ
ಕ್ರಿಮಿನಲ್ ಹಿನ್ನೆಲೆ ಇರಬಾರದು : ಕಸಾಪ ಸದಸ್ಯತ್ವ ಪಡೆದವರಿಗೆ ಕ್ರಿಮಿನಲ್ ಹಿನ್ನೆಲೆ ಇರಬಾರದು ಎಂಬ ಉದ್ದೇಶದಿಂದ, ಒಂದು ವೇಳೆ ಸದರಿ ಪ್ರಕರಣದಲ್ಲಿ ಬಾಗಿಯಾಗಿದ್ದರೆ ಸದಸ್ಯತ್ವವನ್ನು ಅಮಾನತ್ತಿನಲ್ಲಿಡುವ ಅಧಿಕಾರ ಕೇಂದ್ರ ಸಾಹಿತ್ಯ ಪರಿಷತ್ ಅಧ್ಯಕ್ಷರಿಗೆ ಇರುತ್ತದೆ. ಒಂದು ವೇಳೆ ಪ್ರಕರಣ ಇತ್ಯಾರ್ಥವಾದರೆ ಸದಸ್ಯತ್ವ ಮುಂದುವರೆಯಲಿದೆ ಎಂದ ಅವರು, ಮುಂದೆ ಗುರುತಿನ ಚೀಟಿಗೆ ಆಧಾರ್ ಲಿಂಕ್ ಮಾಡುವ ಉದ್ದೇಶದ ಬಗ್ಗೆ ವಿವರಿಸಿದರು. ಕಸಾಪ ಸಂಘ ಸಂಸ್ಥೆ ಪ್ರತಿನಿಧಿ ನಬಿಸಾಬ್ ಕುಷ್ಟಗಿ, ಕಸಾಪ ಅಧ್ಯಕ್ಷ ವೀರೇಶ ಬಂಗಾರಶೆಟ್ಟರ್, ನಾಗರಾಜ್ ಪಟ್ಟಣಶೆಟ್ಟರ್, ಶಿವರಾಜ್ ಪೂಜಾರ, ಮಹೇಶ ಹಡಪದ, ಅಮರೇಗೌಡ ಪಾಟೀಲ, ಮೋಹನಲಾಲ್ ಜೈನ್ ಮತ್ತಿತರಿದ್ದರು.