ಕೊಪ್ಪಳ: ಕೊಪ್ಪಳದ ಭಾಗ್ಯನಗರ ಹಾಗೂ ಓಜಿನಹಳ್ಳಿ ರಸ್ತೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ಮರಳನ್ನು ಜಪ್ತಿ ಮಾಡಲಾಗಿದೆಯೇ, ಹೊರತು ಜನಸಾಮಾನ್ಯರು ಮನೆ ಕಟ್ಟಲು ಹಾಕಿಕೊಂಡಿದ್ದ ಮರಳನ್ನು ಜಪ್ತಿ ಮಾಡಿಲ್ಲವೆಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ದಿಲೀಪ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಸೋಮವಾರ ಪೊಲೀಸ್ ಇಲಾಖೆಯ ಸಹಯೋಗದಲ್ಲಿ ಭಾಗ್ಯನಗರ ಹಾಗೂ ಓಜಿನಹಳ್ಳಿ ರಸ್ತೆಯಲ್ಲಿ ಮರಳನ್ನು ಜಪ್ತಿ ಮಾಡಲಾಗಿತ್ತು. ಈ ಕುರಿತಂತೆ ಸ್ಪಷ್ಟನೆ ನೀಡಿರುವ ದಿಲೀಪ್ ಕುಮಾರ್, ಭಾಗ್ಯನಗರ ಹಾಗೂ ಓಜಿನಹಳ್ಳಿ ರಸ್ತೆಯ ಅಕ್ಕಪಕ್ಕದಲ್ಲಿ ಅಕ್ರಮವಾಗಿ ಮರಳು ಸಂಗ್ರಹಿಸಿರುವ ಕುರಿತಂತೆ ಮಾಹಿತಿ ದೊರಕಿತ್ತು. ಈ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಿ ಅಕ್ರಮವಾಗಿ ಸಂಗ್ರಹಿಸಿದ್ದ ಮರಳನ್ನು ಜಪ್ತಿ ಮಾಡಲಾಗಿದೆ. ಈಗ ಅಲ್ಲಿ ಸುಮಾರು 12 ಕ್ಯೂಬಿಕ್ ಮೀಟರ್ ಮರಳನ್ನು ಜಪ್ತಿ ಮಾಡಲಾಗಿದೆ. ಇನ್ನೂ ಸುಮಾರು 50 ರಿಂದ 60 ಕ್ಯೂಬಿಕ್ ಮೀಟರ್ ಮರಳು ಇದೆ ಎಂದು ಮಾಹಿತಿ ನೀಡಿದ್ರು.
ಜನಸಾಮಾನ್ಯರು ಮನೆ ಕಟ್ಟಿಸಲು ಹಾಕಿಕೊಂಡಿದ್ದ ಮರಳನ್ನು ನಾವು ಜಪ್ತಿ ಮಾಡಿಲ್ಲ. ಆದ್ರೆ, ವಾಣಿಜ್ಯ ಉದ್ದೇಶಕ್ಕಾಗಿ ಅಕ್ರಮವಾಗಿ ಸಂಗ್ರಹಿಸಿದ್ದ ಮರಳನ್ನು ಮಾತ್ರ ಜಪ್ತಿ ಮಾಡಲಾಗಿದೆ. ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.