ಗಂಗಾವತಿ (ಕೊಪ್ಪಳ): ಅಕ್ರಮವಾಗಿ ಮೊರಂ ಗಣಿಗಾರಿಕೆ ನಡೆಯುತ್ತಿದ್ದ ಮಾಹಿತಿ ಮೇರೆಗೆ ಕಳೆದ ಮಧ್ಯರಾತ್ರಿ ಮೂರು ಗಂಟೆಯ ವೇಳೆಗೆ ದಾಳಿ ಮಾಡಿದ ಪೊಲೀಸರು, ಒಂದು ಜೆಸಿಬಿ ಹಾಗೂ ಮೂರು ಟಿಪ್ಪರ್ಗಳನ್ನು ವಶಕ್ಕೆ ಪಡೆದುಕೊಂಡರು. ಈ ಘಟನೆ ತಾಲ್ಲೂಕಿನ ಬಂಡ್ರಾಳ ಗ್ರಾಮದಲ್ಲಿ ನಡೆದಿದೆ.
ವೆಂಕಟಗಿರಿ ಹೋಬಳಿಯ ಬಂಡ್ರಾಳ ಗ್ರಾಮದ ಕೃಷಿ ಭೂಮಿಯಲ್ಲಿ ಅನಧಿಕೃತವಾಗಿ ಮೊರಂ ಗಣಿಗಾರಿಕೆ ಮೂಲಕ ನಿತ್ಯ ಲಕ್ಷಾಂತರ ರೂಪಾಯಿ ಮೌಲ್ಯದ ನೈಸರ್ಗಿಕ ಸಂಪತ್ತನ್ನು ಲೂಟಿ ಹೊಡೆಯಲಾಗುತ್ತಿದೆ ಎಂಬ ಮಾಹಿತಿ ಪೊಲೀಸರಿಗೆ ದೊರೆತಿತ್ತು. ಗಸ್ತು ನಿಯೋಜಿತ ಪೊಲೀಸ್ ವಾಹನ ಹಾಗೂ ಸಿಬ್ಬಂದಿ ಸ್ಥಳಕ್ಕೆ ತೆರಳಿ ಟಿಪ್ಪರ್‌ಗಳು ಹಾಗೂ ಜೆಸಿಬಿ ವಾಹನಗಳನ್ನು ಜಪ್ತಿ ಮಾಡಿಕೊಂಡರು.
ವೆಂಕಟಗಿರಿಯ ಮಂಜುನಾಥ ಮೂಲಿಮನಿ ಹಾಗೂ ಯಮನಪ್ಪ ಎಂಬುವವರು ಅಕ್ರಮ ಮೊರಂ ಗಣಿಗಾರಿಕೆಯಲ್ಲಿ ತೊಡಗಿದ್ದರು. ಬಸಾಪಟ್ಟಣದ ಸಿದ್ದರಾಮಯ್ಯ ಎಂಬುವವರಿಗೆ ಸೇರಿದ ಹೊಲದಲ್ಲಿ ಅಕ್ರಮ ನಡೆಯುತಿತ್ತು ಎಂದು ಗೊತ್ತಾಗಿದೆ. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಇದನ್ನೂ ಓದಿ: ಸೇತುವೆಯಿಂದ 30 ಅಡಿ ಆಳಕ್ಕೆ ಬಿದ್ದ ಬಿಜೆಪಿ ಶಾಸಕ ಪ್ರಯಾಣಿಸುತ್ತಿದ್ದ ಕಾರು - ವಿಡಿಯೋ