ಕುಷ್ಟಗಿ(ಕೊಪ್ಪಳ): ಮಸ್ಕಿ ಉಪ ಚುನಾವಣೆಯಲ್ಲಿ 30 ಕೋಟಿ ರೂ. ಕೊಟ್ಟರೆ ಕಾಂಗ್ರೆಸ್ ಅಭ್ಯರ್ಥಿಯನ್ನು ನಾನೂ ಗೆಲ್ಲಿಸುತ್ತೇನೆ ಎಂದು ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಹೇಳಿದರು.
ಮಸ್ಕಿ ಉಪ ಚುನಾವಣೆಗೆ ಸಿಎಂ ಪುತ್ರ ವಿಜಯೇಂದ್ರ ವಿಜಯ ಯಾತ್ರೆಯ ಬಗ್ಗೆ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಅವರದೇ ಸರ್ಕಾರವಿದೆ. 50ರಿಂದ 60 ಕೋಟಿ ರೂ. ಖರ್ಚು ಮಾಡಿ ವಿಜಯೇಂದ್ರ ಗೆಲ್ಲಿಸುವುದಾದರೆ, ಯಾರೂ ಬೇಕಾದರೂ ಗೆಲ್ಲಿಸಬಹುದು. ನನಗೆ ಅದರಲ್ಲಿ ಅರ್ಧ 30 ಕೋಟಿ ರೂ. ಕೊಟ್ಟರೆ ಸಾಕು, ನಾನೇ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸುತ್ತೇನೆ ಎಂದರು.
ಕಾಂಗ್ರೆಸ್ಗೆ ಈ ಚುನಾವಣೆಯಲ್ಲಿ ಅಷ್ಟೊಂದು ಹಣ ಖರ್ಚು ಮಾಡುವಷ್ಟು ಸಾಮರ್ಥ್ಯವಿಲ್ಲ. ಇಲ್ಲಿಯವರೆಗೂ ನಡೆದಿರುವ ಉಪ ಚುನಾವಣೆಗಳಲ್ಲಿ ಯಾವುದೇ ಪಕ್ಷದ ಸರ್ಕಾರವಾಗಿರಲಿ ಸರ್ಕಾರದ ಪರವಾಗಿ ಫಲಿತಾಂಶ ಬಂದಿದೆ. ಕೊಪ್ಪಳದ ಸಂಗಣ್ಣ ಕರಡಿ ಉಪ ಚುನಾವಣೆಯಲ್ಲಿ ಆಗ ಬಿಜೆಪಿ ಸರ್ಕಾರದಿಂದಲೇ ಗೆದ್ದಿದ್ದರು. ಆದರೆ ಸಾರ್ವತ್ರಿಕ ಚುನಾವಣೆಯಲ್ಲಿ ಸೋತಿದ್ದರು. ಸರ್ಕಾರದ ವಿರುದ್ಧ ಪಕ್ಷ ಗೆದ್ದಿರುವುದಾದರೆ ಸ್ಪರ್ಧಿಸಿದ ಅಭ್ಯರ್ಥಿಯ ವ್ಯಕ್ತಿಯ ವರ್ಚಸ್ಸು ಆಗಿರುತ್ತದೆ ಅಷ್ಟೇ ಎಂದರು.