ಕೊಪ್ಪಳ: ನಾನು ಮುಖ್ಯಮಂತ್ರಿ ಆಗಬೇಕೆಂಬುದು ನನ್ನ ಹಣೆ ಬರಹದಲ್ಲಿದ್ದರೆ ಆಗೇ ಆಗುತ್ತೇನೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿದರು. ಕೊಪ್ಪಳ ಜಿಲ್ಲೆಯ ಬಳೂಟಗಿಯಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನನ್ನನ್ನು ಮಂತ್ರಿ ಮಾಡಿ ಎಂದು ನಾನು ಯಾವ ನಾಯಕರ ಮನೆಗೂ ಹೋಗಿಲ್ಲ ಎಂದು ಹೇಳಿದರು.
ಡಾ. ಬಾಬ ಸಾಹೇಬ್ ಅಂಬೇಡ್ಕರ್ ಈ ದೇಶದ ಮೊದಲ ಪ್ರಧಾನಿಯಾಗಿದ್ದರೆ ಪಾಕಿಸ್ತಾನ ಪ್ರತ್ಯೇಕವಾಗುತ್ತಿರಲಿಲ್ಲ. ಭಾರತ-ಪಾಕಿಸ್ತಾನ ವಿಭಜನೆಯಾದಾಗ ದಲಿತರು ಭಾರತಕ್ಕೆ ಬನ್ನಿ ಎಂದು ಅಂಬೇಡ್ಕರ್ ಕರೆ ನೀಡಿದ್ದರು. ಆದ್ರೆ ಜವಾಹರ ಲಾಲ್ ನೆಹರು ತಾವು ಪ್ರಧಾನಿಯಾಬೇಕೆಂಬ ಕಾರಣಕ್ಕೆ ದೇಶ ವಿಭಜನೆ ಮಾಡಿದರು. ನೆಹರು ಈ ದೇಶಕ್ಕೆ ಶಾಪವಾಗಿದ್ದರು. ಅವರಿಂದಲೇ ದೇಶ ವಿಭಜನೆಯಾಗಬೇಕಾಯಿತು ಎಂದು ಯತ್ನಾಳ್ ಆರೋಪಿಸಿದರು.
ಆದರೆ ಮೋದಿ ಸರ್ಕಾರ ನೆಹರು ಅವರು ಮಾಡಿದ ಎಲ್ಲ ತಪ್ಪುಗಳನ್ನು ತಿದ್ದುವ ಕೆಲಸ ಮಾಡುತ್ತಿದೆ. ದೊಡ್ಡ ದೊಡ್ಡ ದೇಶಗಳ ನಾಯಕರು ಇಂದು ಮೋದಿಯವರ ಕಾರ್ಯವೈಖರಿಗೆ ಬೆದರಿ ಅವರ ಹಿಂದೆ ನಿಲ್ಲುತ್ತಿದ್ದಾರೆ. ಭಾರತದಲ್ಲಿದಲ್ಲಿರುವವರೆಲ್ಲರೂ ಈ ನೆಲದವರು. ಆದರೆ ಮೊಗಲರು ತಮ್ಮ ದಬ್ಬಾಳಿಕೆಯಿಂದ ಅವರನ್ನ ಮತಾಂತರ ಮಾಡಿದ್ದಾರೆ ಎಂದು ಶಾಸಕ ಯತ್ನಾಳ್ ತಿಳಿಸಿದರು.
ಕಾಂಗ್ರೆಸ್ ದೇಶದಲ್ಲಿ ನೆಲಕಚ್ಚಿದೆ. ಇನ್ನೆಂದು ಮೇಲೇಳದ ಸ್ಥಿತಿಗೆ ಬಂದಿದೆ. ಅದರಲ್ಲೂ ರಾಜ್ಯದಲ್ಲಿ ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರ ಮಧ್ಯೆ ಜಗಳ ಪ್ರಾರಂಭವಾಗಿದೆ. ಸಿದ್ದರಾಮಯ್ಯ ಅವರಿಗೆ ಬೇರೆ ಪಕ್ಷಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಬಾಯಿಗೆ ಬಂದಂತೆ ಏನೇನೋ ಮಾತನಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ನೀಡದಿದ್ದರೆ ಮುಂಬರುವ ದಿನಗಳಲ್ಲಿ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನ ಆ ಭಗವಂತ ನೋಡಿಕೊಳ್ಳುತ್ತಾನೆ ಎಂದು ಯತ್ನಾಳ್ ಇದೇ ಸಂದರ್ಭದಲ್ಲಿ ಮಾತನಾಡಿದರು.
ಇದನ್ನೂ ಓದಿ: ಸಿಎಂ ಸ್ಥಾನಕ್ಕೆ ಲಂಚ ಆರೋಪ ಮಾಡಿರುವ ಯತ್ನಾಳ್ ತನಿಖೆಗೆ ಒಳಪಡಿಸಿ: ಎಸಿಬಿಗೆ ಕಾಂಗ್ರೆಸ್ ದೂರು