ಗಂಗಾವತಿ: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕದಿಂದಲೂ ಸಚಿವ ಸಂಪುಟದಲ್ಲಿ ಸ್ಥಾನ ಸಿಗಬೇಕು ಎಂಬ ಬೇಡಿಕೆ ಇಟ್ಟಿರುವೆ. ಸಚಿವ ಸ್ಥಾನ ಕೇಳುವುದು ತಪ್ಪಲ್ಲ. ಬೇಡಿಕೆ ಇಟ್ಟಿರುವೆ, ಮುಂದೆಯೂ ಇಡುವೆ. ಆದರೆ ಕೊಡುವುದು ಬಿಡುವುದು ಹೈಕಮಾಂಡ್ಗೆ ಬಿಟ್ಟಿದ್ದು. ಹೈಕಮಾಂಡ್ ನಿರ್ಧಾರಕ್ಕೆ ಬದ್ಧ ಎಂದು ಶಾಸಕ ಪರಣ್ಣ ಮುನವಳ್ಳಿ ಹೇಳಿದರು.
ಈ ಬಗ್ಗೆ ಮಾತನಾಡಿದ ಅವರು, ಇತ್ತೀಚೆಗೆ ನಿಗಮ ಮಂಡಳಿಗಳಿಗೆ ನೇಮಕ ಮಾಡುವ ಸಂದರ್ಭದಲ್ಲಿ ರಾಜ್ಯ ಹಣಕಾಸು ಸಂಸ್ಥೆಗೆ ಆಯ್ಕೆ ಮಾಡಿ ಕೆಲವೇ ಗಂಟೆಗಳಲ್ಲಿ ಕೈಬಿಟ್ಟ ಬಗ್ಗೆ ಸುದ್ದಿಗಾರರು ಪ್ರಶ್ನಿಸಿದ್ದಕ್ಕೆ ಶಾಸಕ ಪ್ರತಿಕ್ರಿಯೆ ನೀಡಿದರು. ತಾಂತ್ರಿಕ ಕಾರಣಕ್ಕೆ ಸಿಎಂ ಯಡಿಯೂರಪ್ಪ ನೇಮಕಾತಿ ಹಿಂಪಡೆದಿದ್ದಾರೆ. ಮುಂದೆ ಅದಕ್ಕಿಂತಲೂ ದೊಡ್ಡ ಹುದ್ದೆ ನೀಡಬಹುದು. ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಕೊಪ್ಪಳ ಜಿಲ್ಲೆಗೆ ಸಚಿವ ಸ್ಥಾನ ನೀಡುವಂತೆ ಕೋರಲಾಗಿದೆ. ಇದೀಗ ಮತ್ತೆ ಮೂರು ಸಚಿವ ಸ್ಥಾನಗಳ ಭರ್ತಿಗೆ ಸಿಎಂ ಮುಂದಾಗಿದ್ದು, ಈ ಸಂದರ್ಭದಲ್ಲೂ ಮತ್ತೆ ಮನವಿ ಮಾಡಲಾಗುವುದು. ಬೇಡಿಕೆ ಇಡುವುದು ಮನುಷ್ಯನ ಸಹಜ ಗುಣ. ಜಿಲ್ಲೆಗೆ ಪ್ರಾತಿನಿಧ್ಯ ಕೊಡಿ ಎಂದು ಮತ್ತೆ ಕೇಳುತ್ತೇವೆ ಎಂದರು.