ಕೊಪ್ಪಳ: ಅನ್ಲಾಕ್ ಕಾರಣ ರಾಜ್ಯಾದ್ಯಂತ ನಿನ್ನೆಯಿಂದ ದೇವಸ್ಥಾನಗಳ ಬಾಗಿಲು ತೆರೆದಿದ್ದು, ಮೊದಲ ಮಂಗಳವಾರವಾದ ಇಂದು ಕೊಪ್ಪಳ ತಾಲೂಕಿನ ಹುಲಗಿ ಗ್ರಾಮದ ಹುಲಿಗೆಮ್ಮದೇವಿ ದೇವಸ್ಥಾನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದರು.
ದೇವಸ್ಥಾನದಲ್ಲಿ ದೇವರ ದರ್ಶನಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ಯಾವುದೇ ಸೇವೆಗೆ ಅವಕಾಶವಿಲ್ಲದಿದ್ದರೂ ಸಹ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಹುಲಗಿಗೆ ಆಗಮಿಸುತ್ತಿದ್ದಾರೆ. ಕೋವಿಡ್ ಮಾರ್ಗಸೂಚಿ ಪಾಲಿಸುವಂತೆ ದೇವಸ್ಥಾನ ಸಮಿತಿ ಸೂಚನೆ ನೀಡಿದರೂ ಕೂಡಾ ಜನರು ಮಾತ್ರ ದೇಗುಲ ಸಿಬ್ಬಂದಿ ಕಂಡಾಗ ಮಾತ್ರ ಮಾಸ್ಕ್ ಧರಿಸುತ್ತಿದ್ದಾರೆ.
ದೇವರ ದರ್ಶನದ ಸರತಿ ಸಾಲಿನಲ್ಲಿ ಸಾಮಾಜಿಕ ಅಂತರವಂತೂ ಮಾಯವಾಗಿದೆ. ಕಡ್ಡಾಯವಾಗಿ ಮಾಸ್ಕ್ ಧರಿಸಿ ಅಂತರ ಕಾಪಾಡುವಂತೆ ದೇವಸ್ಥಾನ ಆಡಳಿತ ಮಂಡಳಿ ಲೌಡ್ಸ್ಪೀಕರ್ನಲ್ಲಿ ಜಾಗೃತಿ ಮೂಡಿಸುತ್ತಿದ್ದರೂ ಭಕ್ತರು ತಮಗೂ ಅದಕ್ಕೂ ಯಾವುದೇ ಸಂಬಂಧವಿಲ್ಲ ಎನ್ನುವಂತಿದ್ದಾರೆ.
ಸರ್ಕಾರದ ಸೂಚನೆಯಂತೆ ಕೇವಲ ದರ್ಶನಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ಬರುವ ಹುಣ್ಣಿಮೆಯ ದಿನದಂದು ಸುಮಾರು ಒಂದು ಲಕ್ಷಕ್ಕೂ ಅಧಿಕ ಭಕ್ತರು ದೇವಿಯ ದರ್ಶನಕ್ಕೆ ಆಗಮಿಸುವ ನಿರೀಕ್ಷೆ ಇದ್ದು ಈ ಕುರಿತಂತೆ ಜಿಲ್ಲಾಡಳಿತಕ್ಕೆ ಪತ್ರ ಬರೆಯಲಾಗುತ್ತದೆ. ಜಿಲ್ಲಾಡಳಿತದ ಸೂಚನೆಯಂತೆ ಕ್ರಮ ಕೈಗೊಳ್ಳಲಾಗುವುದು ಎಂದು ದೇವಸ್ಥಾನದ ಕಾರ್ಯ ನಿರ್ವಹಣಾಧಿಕಾರಿ ಅರವಿಂದ ಸುತಗಟ್ಟಿ ತಿಳಿಸಿದರು.