ಕೊಪ್ಪಳ : ಕುಷ್ಟಗಿ ಪಟ್ಟಣದ ಸಾಮಿಲ್ ನಡೆಸುತ್ತಿರುವ ಮಲ್ಲಿಕಾರ್ಜುನ್ ಮಂಗಳೂರ ಎಂಬುವರ ಮನೆ ಬಾಗಿಲು ಇತಿಹಾಸ ನೆನಪಿಸುವ ಹಾಗೂ ಅತೀ ದೊಡ್ಡ ದ್ವಾರಬಾಗಿಲು ಎಂಬುದಾಗಿ ಹೆಸರಾಗುತ್ತಿದೆ.
ಒತ್ತೋಳಿನ ಬಾಗಿಲುಗಳನ್ನು ಈಗ ನೋಡುವುದೇ ಅಪರೂಪ. ಬಾಗಿಲ ಮೇಲಿನ ವಿಶೇಷ ಕೆತ್ತನೆಯಿಂದಾಗಿ ನೋಡಲು ಇದು ಪುರಾತನ ಕಾಲದ ಮನೆಯೆಂಬಂತೆ ಗೋಚರಿಸುತ್ತದೆ. ಈ ಹಿಂದೆ ಅರಮನೆ, ವಾಡೆ, ಗೌಡರು, ಜಮೀನ್ದಾರರ ನಿವಾಸಗಳಿಗೆ ಇರುತ್ತಿದ್ದ ದೊಡ್ಡ ದೊಡ್ಡ ಕಲಾತ್ಮಕ ತಲೆಬಾಗಿಲು ರೀತಿಯೇ ಈ ಮನೆಯ ಮುಖ್ಯ ಆಕರ್ಷಣೆಯಾಗಿದೆ. ಗ್ರಾಮೀಣ ಭಾಷೆಯಲ್ಲಿ ಕರೆಯಲಾಗುವ ಒತ್ತೋಳಿನ ಈ ಬಾಗಿಲು ಬರೋಬ್ಬರಿ 8 ಮತ್ತು 10 ಅಡಿ ಅಳತೆಯಲ್ಲಿದೆ. ಒಂದರ ಪಕ್ಕ ಮತ್ತೊಂದರಂತೆ ಬಾಗಿಲಿಗೆ ಸುಮಾರು 5 ತೋಳುಗಳನ್ನು ಜೋಡಿಸಲಾಗಿದೆ.
ಹೊಸ್ತಿಲಿನಿ ಗಾತ್ರವೂ ದೊಡ್ಡದಾಗಿದೆ. ಈ ಬಾಗಿಲಿನ ಪ್ರತಿ ತೋಳು ಸಹ ಕಲಾತ್ಮಕ ಕೆತ್ತನೆಯಿಂದ ಕೂಡಿದೆ. ಒಳಗಿನ ದೇವರ ಮನೆಯ ಬಾಗಿಲು ಸಹ ವಿಶಿಷ್ಟವಾಗಿದೆ. ಈ ಮನೆಗೆ 'ಅರಮನೆ' ಎಂದು ಹೆಸರನ್ನಿಡಲಾಗಿದೆ ಎನ್ನುತ್ತಾರೆ ಮನೆ ಮಾಲೀಕ ಮಲ್ಲಿಕಾರ್ಜುನ ಮಂಗಳೂರ.
ಈಗ ಒತ್ತೋಳಿನ ಬಾಗಿಲು ಮಾಡುವವರು ಕಡಿಮೆಯಾಗಿದ್ದಾರೆ. ಮನೆಯ ಮಾಲೀಕರ ಆಸಕ್ತಿಯಂತೆ ಈ ಬಾಗಿಲನ್ನು ಮಾಡಲಾಗಿದೆ. ಹಿಂದೆ ಇಂತಹ ಬಾಗಿಲುಗಳು ಊರ ಪ್ರಮುಖರ ಮನೆಗಳಿಗೆ ಇರುತ್ತಿದ್ದವು. ಈಗ ಇಂತಹ ಬಾಗಿಲಗಳು ಅಪರೂಪ ಎನ್ನುತ್ತಾರೆ ಒತ್ತೋಳು ಬಾಗಿಲು ತಯಾರಿಸಿರುವ ನಾಗರಾಜ ಬಡಿಗೇರ. ಮನೆಯಲ್ಲಿನ ಕಲಾತ್ಮಕ ಒತ್ತೋಳಿನ ತಲೆಬಾಗಿಲು ಜನಸಾಮಾನ್ಯರನ್ನ ಸೆಳೆಯುತ್ತಿರೋದಂತು ನಿಜ.