ಕೊಪ್ಪಳ: ಜಮ್ಮು ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ದುಪಡಿಸಿದಂತೆ ಮುಂದಿನ ದಿನಗಳಲ್ಲಿ ಹೈದರಾಬಾದ್ ಕರ್ನಾಟಕಕ್ಕೆ ನೀಡಲಾಗಿರುವ ಸಂವಿಧಾನದ 371 ಜೆ ಕಲಂನ್ನು ತೆಗೆಯುವ ಹುನ್ನಾರವಿದೆ ಎಂದು ಮಾಜಿ ಸಚಿವ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವರಾಜ ತಂಗಡಗಿ ಆರೋಪಿಸಿದ್ದಾರೆ.
ಜಿಲ್ಲೆಯ ಕನಕಗಿರಿ ತಾಲೂಕು ಮುಸಲಾಪುರದಿಂದ ಕನಕಗಿರಿಯವರೆಗೆ ಹಮ್ಮಿಕೊಂಡಿದ್ದ ಸದ್ಭಾವನಾ ಯಾತ್ರೆಯ ಸಂದರ್ಭದಲ್ಲಿ ಮಾತನಾಡಿ, ಜಮ್ಮು ಕಾಶ್ಮೀರದಲ್ಲಿ ಸಂವಿಧಾನದ 370 ನೇ ಕಲಂ ರದ್ದುಪಡಿಸುವಾಗ ಅಲ್ಲಿನ ನಾಯಕರನ್ನು ಬಂಧನದಲ್ಲಿಟ್ಟಿದ್ದರು. ಮುಂದಿನ ದಿನ ಈ ಭಾಗಕ್ಕೂ ಅದು ಬರುವ ಹುನ್ನಾರವಿದೆ. ಹೈದರಾಬಾದ್ ಕರ್ನಾಟಕಕ್ಕೆ ನೀಡಲಾಗಿರುವ ಸಂವಿಧಾನದ 371 ನೇ ಕಲಂ ರದ್ದುಪಡಿಸಲು ಈ ಭಾಗದ ನಾಯಕರನ್ನು ಬಂಧನದಲ್ಲಿಡುತ್ತಾರೆ. 371 ನೇ ಜೆ ಕಲಂ ಪ್ರಕಾರ ಉದ್ಯೋಗ, ಶಿಕ್ಷಣದ ಮೀಸಲಾತಿ ಇದೆ. ಹೀಗಾಗಿ, ಜನರು ಎಚ್ಚೆತ್ತುಕೊಳ್ಳಬೇಕು ಎಂದರು.
ರಾಜ್ಯಗಳ ನಡುವೆ ಗಿವ್ ಆ್ಯಂಡ್ ಟೇಕ್ ಪಾಲಿಸಿ ಇರಬೇಕು. ಆದರೆ, ನಮ್ಮಲ್ಲಿ ನೀರು ಇದೆಯಾ ಎಂಬುದನ್ನು ನೋಡಿಕೊಂಡು ಕೊಡಬೇಕು. ಮುಖ್ಯಮಂತ್ರಿ ಯಡಿಯೂರಪ್ಪ ಮಹಾರಾಷ್ಟ್ರಕ್ಕೆ ನೀರು ಬಿಡುವ ಹೇಳಿಕೆ ಹಿಂದೆ ರಾಜಕೀಯ ಗಿಮಿಕ್ ಇದೆ. ಮಹಾದಾಯಿ ಹೋರಾಟಗಾರರು, ನೆರೆ ಸಂತ್ರಸ್ತರ ಕೂಗು ಇವರಿಗೆ ಕೇಳಿಸುತ್ತಿಲ್ಲ. ಸರ್ಕಾರದ ಮಂತ್ರಿಗಳು ಮಹಾರಾಷ್ಟ್ರದ ಚುನಾವಣೆಯಲ್ಲಿ ಮುಳುಗಿದ್ದಾರೆ ಎಂದು ಕಿಡಿಕಾರಿದರು.