ಗಂಗಾವತಿ (ಕೊಪ್ಪಳ) : ಭಾರತವನ್ನು ಒಗ್ಗೂಡಿಸುವ ಉದ್ದೇಶಕ್ಕೆ ಪಾಪ ರಾಹುಲ್ ಬಾಬಾ ಭಾರತ ಜೋಡೋ ಯಾತ್ರೆ ಹಮ್ಮಿಕೊಂಡಿದ್ದರು. ವಾಸ್ತವದಲ್ಲಿ ಭಾರತ ತೋಡೋ (ಇಬ್ಬಾಗಿಸುವ) ಯಾತ್ರೆ ಆರಂಭಿಸಿದ್ದೇ ರಾಹುಲ್ ಬಾಬಾ ಅವರ ತಾತ ನೆಹರೂ ಎಂದು ಎಂದು ಅಸ್ಸೋಂ ಮುಖ್ಯಮಂತ್ರಿ ಹಿಮಂತ ಬಿಸ್ವಾಸ್ ಶರ್ಮ ಹೇಳಿದರು. ಬಿಜೆಪಿ ಹಮ್ಮಿಕೊಂಡಿರುವ ವಿಜಯ ಸಂಕಲ್ಪ ಯಾತ್ರೆಯ ಭಾಗವಾಗಿ ನಗರದ ಮಹಾತ್ಮಗಾಂಧಿ ವೃತ್ತದಲ್ಲಿ ಸೋಮವಾರ ನಡೆದ ಬಹಿರಂಗ ಸಮಾವೇಶ ಉದ್ದೇಶಿಸಿ ಮಾತನಾಡಿದ ಹಿಮಂತ ಬಿಸ್ವಾಸ್ ಶರ್ಮ, ದೇಶದ ಜನರಿಂದ ಈಗಾಗಲೇ ತಿರಸ್ಕಾರಕ್ಕೆ ಒಳಗಾಗಿರುವ ಕಾಂಗ್ರೆಸ್ ನಿಧಾನವಾಗಿ ಅವನತಿಯ ಹಾದಿ ಹಿಡಿದಿದೆ ಎಂದರು.
ಭಾರತವನ್ನು ಒಗ್ಗೂಡಿಸುತ್ತೇನೆ ಎಂದು ರಾಹುಲ್ ಬಾಬಾ ಹೊರಟಿದ್ದಾರೆ. ಹಾಗಾದರೆ ಭಾರತವನ್ನು 1947ರಲ್ಲಿ ಇಬ್ಭಾಗ ಮಾಡಿದ್ದು ಯಾರು? ಎಂಬ ಪ್ರಶ್ನೆಯನ್ನು ಟ್ವೀಟ್ ಮೂಲಕ ರಾಹುಲ್ ಗಾಂಧಿಗೆ ನಾನು ಕೇಳಿದ್ದೆ. ಅದಕ್ಕೆ ಅವರು ಉತ್ತರವೇ ನೀಡಲಿಲ್ಲ ಎಂದರು.
ನಿಮ್ಮ ಆಡಳಿತದಲ್ಲಿ ಜಮ್ಮು-ಕಾಶ್ಮೀರವನ್ನು ಹೇಗೆ ಇಟ್ಟಿದ್ದೀರಿ? ಈಗ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಷಾ ಈಗ ಹೇಗಿಟ್ಟಿದ್ದಾರೆ ಎಂಬುವುದು ಜನರಿಗೆ ಗೊತ್ತಾಗುತ್ತಿದೆ. ರಾಹುಲ್ ಬಾಬಾ ಈಗ ಭಾರತ್ ಜೋಡೋ ಕೈಗೊಂಡು ಏನು ಪ್ರಯೋಜನ ಎಂದು ಬಿಸ್ವಾಸ್ ಪ್ರಶ್ನಿಸಿದರು.
ದೇಶದ ಮೂಲೆ ಮೂಲೆಯಲ್ಲೂ ಕಣ್ಮರೆಯಾದ ಕಾಂಗ್ರೆಸ್ : ಭಾರತವನ್ನು ಶಕ್ತಿಶಾಲಿಯನ್ನಾಗಿಸುವ ಸುದೀರ್ಘ ಅವಕಾಶ ಕಾಂಗ್ರೆಸ್ ಪಕ್ಷಕ್ಕೆ ಲಭಿಸಿದ್ದರೂ ಅದನ್ನು ವ್ಯರ್ಥ ಮಾಡಿದೆ. ಜನರ ಭಾವನೆಗಳೊಂದಿಗೆ ಆಟವಾಡಿದ ಕಾಂಗ್ರೆಸ್ ಈಗಾಗಲೇ ದೇಶದ ಎಲ್ಲ ಮೂಲೆಯಲ್ಲೂ ಕಣ್ಮರೆಯಾಗಿದೆ. ಅಸ್ಸೋಂನಂತಗ ರಾಜ್ಯದಲ್ಲಿ ಒಂದೇ ಒಂದು ಸ್ಥಾನ ಕಾಂಗ್ರೆಸ್ಗೆ ಬಿಟ್ಟುಕೊಟ್ಟಿಲ್ಲ ಎಂದರು. ಇದೀಗ ಮೋದಿ ನೇತೃತ್ವದಲ್ಲಿನ ಸರ್ಕಾರ ಸದೃಢವಾಗಿದೆ. ಅಭಿವೃದ್ಧಿ, ಆಂತರಿಕ ಶಕ್ತಿಯಲ್ಲಿ ವಿಶ್ವದ ಬಲಾಢ್ಯ ದೇಶಗಳ ಸಾಲಿನಲ್ಲಿ ನಿಲ್ಲುತ್ತಿದೆ. ಇಂದು ಭಾರತ ವಿಶ್ವಮಾನ್ಯವಾಗಿದ್ದು, ವಿದೇಶದಲ್ಲಿ ಭಾರತದ ಅಭಿವೃದ್ಧಿ, ನಾಯಕತ್ವದ ಚರ್ಚೆಯಾಗುತ್ತಿದೆ ಎಂದು ಬಿಸ್ವಾಸ್ ಹೇಳಿದರು.
ಹನುಮನ ಪ್ರತಿರೂಪ ಮೋದಿ : ರಾಮಾಯಣದ ಕಾಲದಲ್ಲಿ ಭಾರತದ ಸಂಸ್ಕೃತಿ, ಪರಂಪರೆ ಮತ್ತು ಧರ್ಮ ಉಳಿಸುವ ಕೆಲಸ ರಾಮನ ಬಂಟ ಹನುಮಂತ ಮಾಡಿದ್ದ. ಅದೇ ಕೆಲಸವನ್ನು ಇದೀಗ ಪ್ರಧಾನಿ ಹುದ್ದೆ ಅಲಂಕರಿಸಿರುವ ನರೇಂದ್ರ ಮೋದಿ ಭಾರತದ ಪುನರುತ್ಥಾನ ಕಾರ್ಯ ಮಾಡುತ್ತಿದ್ದಾರೆ. ಕರ್ನಾಟಕಕ್ಕೆ ಬರುವ ಉದ್ದೇಶವೇ ನನಗಿರಲಿಲ್ಲ. ಈ ನೆಲದ ಭಾಷೆಯೂ ಗೊತ್ತಿರಲಿಲ್ಲ. ಆದರೆ ಹನುಮ ಜನ್ಮ ಭೂಮಿ ಎಂಬ ಏಕೈಕ ಕಾರಣಕ್ಕೆ ನಾನು ಎರಡು ದಿನಗಳ ಬಿಜೆಪಿ ಪ್ರಚಾರ ಕಾರ್ಯಕ್ರಮಕ್ಕೆ ಆಗಮಿಸಿದ್ದೇನೆ. ಹನುಮನು ಜನಿಸಿದ ನಾಡಲ್ಲಿರುವ ನೀವೇ ಧನ್ಯರು ಎಂದು ಬಿಸ್ವಾಸ್ ಹೇಳಿದರು.
ಕಾಂಗ್ರೆಸ್ ಎಲ್ಲಿದೆ ಹುಡುಕಿ : ಕಾಂಗ್ರೆಸ್ ಎಂಬ ಪಕ್ಷ ಇದೀಗ ದೇಶದಿಂದ ಕಣ್ಮರೆಯಾಗುತ್ತಿದೆ. ಹುಡುಕುವ ಸ್ಥಿತಿಗೆ ಬಂದಿದೆ. ಇದಕ್ಕೆ ಸ್ವಯಂಕೃತ ಅಪರಾಧಗಳು ಕಾರಣ. ದೇಶವನ್ನು ಆಡಳಿತ ಮಾಡುವ ಸುಧೀರ್ಘ ಅವಕಾಶ ಸಿಕ್ಕಿದ್ದರೂ ಕೂಡ ಕಾಂಗ್ರೆಸ್ ಅಭಿವೃದ್ಧಿಯ ಚಿಂತನೆ ನಡೆಸಿರಲಿಲ್ಲ. ಹೀಗಾಗಿ ದೇಶದಿಂದ ನಿಧಾನವಾಗಿ ಕಾಂಗ್ರೆಸ್ ಕಣ್ಮರೆಯಾಗುತ್ತಿದೆ. ಉತ್ತರ ಪ್ರದೇಶದಲ್ಲಿ ಕೇವಲ ಮೂರು ಸ್ಥಾನ, ಮೇಘಾಲಯ, ತ್ರಿಪುರ, ನಾಗಾಲ್ಯಾಂಡ್ನಲ್ಲಿ ಕಾಂಗ್ರೆಸ್ ಸಂಪೂರ್ಣ ನೆಲಕಚ್ಚಿದೆ. ಉತ್ತರ ಪ್ರದೇಶ, ಮಹಾರಾಷ್ಟ್ರದಲ್ಲಿ ವಿಫಲವಾಗಿದೆ.
ಕಾಂಗ್ರೆಸ್ ಎಂದಿಗೂ ನಮ್ಮ ವಿಕಾಸದ ಬಗ್ಗೆ ಚಿಂತನೆ ಮಾಡಲಿಲ್ಲ. ನಮ್ಮ ಸಮಸ್ಯೆಗಳ ಬಗ್ಗೆ ಸ್ಪಂದಿಸುವ ಕೆಲಸ ಮಾಡಲಿಲ್ಲ. ಕೇವಲ ತುಷ್ಟೀಕರಣ ಮಾಡುತ್ತಲೇ ಕಾಲಹರಣ ಮಾಡಿದೆ. ಇದು ಈಗ ಜನರ ಗಮನಕ್ಕೆ ಬಂದಿದ್ದು, ಕಾಂಗ್ರೆಸ್ ತಿರಸ್ಕಾರಕ್ಕೆ ಕಾರಣವಾಗಿದೆ ಎಂದರು.
ಇದನ್ನೂ ಓದಿ : ಚಲೋ ರಾಜಭವನ್ .. ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ