ಕುಷ್ಟಗಿ(ಕೊಪ್ಪಳ): ಸಮಾನ ಕೆಲಸಕ್ಕೆ ಸಮಾನ ವೇತನ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಯ ಹೊರಗುತ್ತಿಗೆ ನೌಕರರ ಸಂಘ ಅನಿರ್ದಿಷ್ಟಾವಧಿ ಮುಷ್ಕರ ನಡೆಸಿದರು.
ತಹಶೀಲ್ದಾರ್ ಕಚೇರಿ ಎದುರು ಧರಣಿ ನಡೆಸಿದ ಮುಷ್ಕರ ನಿರತ ಸಿಬ್ಬಂದಿ, ನ್ಯಾಯಯುತ ಬೇಡಿಕೆಗಳಿಗಾಗಿ ಮುಷ್ಕರ ನಿರತರಾದವರನ್ನ ಕೆಲಸದಿಂದ ವಜಾಗೊಳಿಸಿರುವ ಕ್ರಮ ಖಂಡಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ತಹಶೀಲ್ದಾರ್ ಎಂ ಸಿದ್ದೇಶ್ ಅವರಿಗೆ ಮನವಿ ಸಲ್ಲಿಸಿದರು.
ಇದೇ ವೇಳೆ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಗವಿಸಿದ್ದಪ್ಪ ಉಪ್ಪಾರ ಮಾತನಾಡಿ, ಸಂಘದ ನೇತೃತ್ವದಲ್ಲಿ ಕೆಲಸ ಬಹಿಷ್ಕರಿಸಿ ಅಸಹಕಾರ ಚಳವಳಿ ನಿರತರಾಗಿದ್ದೇವೆ. 10 ದಿನಗಳಾದ್ರೂ ಸರ್ಕಾರ ಸ್ಪಂದಿಸಿಲ್ಲ. ಹಾಗಾಗಿ ಬೀದಿಗಿಳಿದು ಹೋರಾಟ ಮಾಡೋದು ಅನಿವಾರ್ಯ.
ಕೆಲಸ ನಿರ್ವಹಿಸುವಾಗ ಚಪ್ಪಾಳೆ ತಟ್ಟಿ, ಹೂವಿನ ಮಳೆಗರೆದು ಕೊರೊನಾ ವಾರಿಯರ್ಸ್ ಎಂದು ಕೊಂಡಾಡಿದ್ದರು. ಇದೀಗ ನ್ಯಾಯಯುತ ಬೇಡಿಕೆ ಕೇಳಿದ್ರೆ ಕೆಲಸದಿಂದ ವಜಾಗೊಳಿಸಿರುವ ಕ್ರಮ ಪ್ರಶ್ನಿಸಿದರು. ಸರ್ಕಾರದ ವಿರುದ್ಧ ಸಿಡಿದೇಳುವ ಪ್ರಸಂಗ ಬಂದಿದೆ.
ಕಳೆದ 15 ವರ್ಷಗಳಿಂದ 10ರಿಂದ 12 ಸಾವಿರಕ್ಕೆ ಜೀತದಾಳಿನಂತೆ ಕೆಲಸ ಮಾಡಿದ್ರೂ, ಸರ್ಕಾರ ಕನಿಷ್ಟ ವೇತನದಲ್ಲಿ ಮುಂದುವರಿಸಿದೆ. ಸಮಾನ ಕೆಲಸಕ್ಕೆ ಸಮಾನ ವೇತನ, ಸೇವಾ ಭದ್ರತೆ ಕೊಡುವುದಾಗಿ ಭರವಸೆ ನೀಡಿಯೂ ವಂಚಿಸಿದೆ. ಇದರಿಂದ ಮುಷ್ಕರ ನಿರತರಾದ 26 ಸಿಬ್ಬಂದಿಯನ್ನು ವಜಾಗೊಳಿಸುವ ಮೂಲಕ ಕ್ರೂರವಾಗಿ ವರ್ತಿಸಿದೆ ಎಂದು ಕಿಡಿಕಾರಿದರು.