ಗಂಗಾವತಿ: ಕೊರೊನಾ ಸೋಂಕಿನಿಂದ ಒಂದು ವಾರದಿಂದ ಹೋಂ ಐಸೋಲೇಷನ್ನಲ್ಲಿದ್ದ ವ್ಯಕ್ತಿ ಮೃತಪಟ್ಟಿದ್ದಾರೆ. ಈ ಹಿನ್ನೆಲೆ ಕೊರೊನಾ ನಿಯಮಾವಳಿಯಂತೆ ಅಂತ್ಯಕ್ರಿಯೆ ಮಾಡಲು ಬಂದಿದ್ದ ಆರೋಗ್ಯ ಇಲಾಖೆ ಸಿಬ್ಬಂದಿ ಶವ ಸಂಸ್ಕಾರ ಮಾಡದೆ ತೆರಳಿದ ಘಟನೆ ಬೆಳಕಿಗೆ ಬಂದಿದೆ.
ತಾಲೂಕಿನ ಅರಳಿಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, 55 ವರ್ಷದ ವ್ಯಕ್ತಿ ಕೋವಿಡ್ನಿಂದ ಮೃತಪಟ್ಟಿದ್ದ. ಈ ಬಗ್ಗೆ ಗ್ರಾಮಸ್ಥರು ಮಾಹಿತಿ ನೀಡಿದ ಬಳಿಕ ಆರೋಗ್ಯ ಇಲಾಖೆಯ ಇಬ್ಬರು ಸಿಬ್ಬಂದಿ ಯಾವುದೇ ಪಿಪಿಇ ಕಿಟ್ ಧರಿಸದೆ, ಹಗ್ಗದ ಮೂಲಕ ಮೃತ ವ್ಯಕ್ತಿಯನ್ನು ಎಳೆದೊಯ್ಯಲು ಯತ್ನಿಸಿದ್ದಾರೆ ಎನ್ನಲಾಗಿದೆ.
ಇದಕ್ಕೆ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆ ಸಿಬ್ಬಂದಿ ತಂದಿದ್ದ ಪರಿಕರ, ಔಷಧಿಗಳನ್ನು ಸ್ಥಳದಲ್ಲಿ ಬಿಟ್ಟು ಅಗತ್ಯವಿದ್ದರೆ ನೀವೇ ಅಂತ್ಯ ಸಂಸ್ಕಾರ ಮಾಡಿಕೊಳ್ಳಿ ಎಂದು ಹೊರಟು ಹೋಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಇದರಿಂದ ಸ್ಥಳೀಯರು ಆರೋಗ್ಯ ಸಿಬ್ಬಂದಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.