ಕುಷ್ಟಗಿ (ಕೊಪ್ಪಳ): ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಹನುಮಸಾಗರ ಸರ್ಕಾರಿ ಪದವಿಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದಲ್ಲಿ ಸಹಶಿಕ್ಷಕರಾಗಿರುವ ಕಿಶನ್‌ರಾವ್ ಕುಲಕರ್ಣಿ, 2021-22ನೇ ಸಾಲಿನ ರಾಜ್ಯ ಸರ್ಕಾರದ ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಮೂಲತಃ ಯಲಬುರ್ಗಾ ತಾಲೂಕು ಹಿರೇಅರಳಿಹಳ್ಳಿಯವರಾದ ಇವರು, 25 ವರ್ಷಗಳ ಸೇವಾ ಅವಧಿಯಲ್ಲಿ ಸುಮಾರು 20 ವರ್ಷ ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸಿದ್ದಾರೆ.
ನೂರಾರು ಲೇಖನ ಹೊರತಂದ ಶಿಕ್ಷಕ
ರಾಜ್ಯ ಸೇರಿದಂತೆ ರಾಷ್ಟ್ರದ ವಿವಿಧ ಭಾಗಗಳಲ್ಲಿ ನಡೆಯುವ ಶೈಕ್ಷಣಿಕ ಸಂಶೋಧನಾ ಚಟುವಟಿಕೆಗಳಲ್ಲಿ ಪಾಲ್ಗೊಂಡು ತಮ್ಮ ಶಾಲೆಯಲ್ಲಿ ಅಳವಡಿಕೊಂಡಿದ್ದಾರೆ. 2020-21ರಲ್ಲಿ ಚಂದನ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಇ-ಸಂವೇದ ಕಲಿಕಾ ಪಾಠಗಳ ಬೋಧನೆ, ಇಂಡಿಯಾ ಫೌಂಡೇಷನ್ ಫಾರ್ ದಿ ಆರ್ಟ್ಸ್, ಬೆಂಗಳೂರು ಸಂಸ್ಥೆಯವರ ನೆರವಿನಲ್ಲಿ 40 ವಿದ್ಯಾರ್ಥಿಗಳ ಮೇಲೆ ಸ್ವಂತ ಕಲಿಕಾ ಯೋಜನೆಯೊಂದನ್ನು ಹಾಕಿಕೊಂಡು ಯಶಸ್ವಿ ಪ್ರಯೋಗ ಮಾಡಿದ್ದಾರೆ.
ಇತ್ತಿಚೆಗೆ ವಿದ್ಯಾರ್ಥಿಗಳ ಬೋಧನೆಯಲ್ಲಿ ಆಧುನಿಕ ತಂತ್ರಜ್ಞಾನವನ್ನು ಬಳಸಿ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಶಿಕ್ಷಕರಾಗಿ ಹೊರಹೊಮ್ಮಿದ್ದಾರೆ. ಶಿಕ್ಷಕ ಕಿಶನ್ ರಾವ್ ಅವರು 2021ರಲ್ಲಿ ಮಕ್ಕಳೇ ಬರೆದ "ಗುಳ್ಳವ್ವ ಬರ್ತಾಳೆ-ಜಲಪದ-ಜನಪದ" ಪುಸ್ತಕ ಸೇರಿದಂತೆ ಒಟ್ಟು ಐದು ಪುಸ್ತಕಗಳನ್ನು ಹೊರತಂದಿದ್ದಾರೆ, ರಾಜ್ಯ ಮಟ್ಟದ ಕನ್ನಡ ಹಾಗೂ ಇಂಗ್ಲಿಷ್ ಪತ್ರಿಕೆಗಳಲ್ಲಿ 20 ವರ್ಷಗಳಿಂದ ನೂರಾರು ಲೇಖನಗಳು ಪ್ರಕಟಗೊಂಡಿವೆ.
ಸರ್ಕಾರದ ಕೈಪಿಡಿ ‘ಕಣಜ’ದಲ್ಲೂ ಅಂಕಣಕಾರ
ಕರ್ನಾಟಕ ಸರ್ಕಾರ ‘ಕಣಜ’ ವೆಬ್‌ಸೈಟನಲ್ಲಿ ಅಂಕಣಕಾರರಾಗಿ, ಗಣತಿ ಹಾಗೂ ಚುನಾವಣೆಯಲ್ಲಿ ಮಾಸ್ಟರ್ ಟ್ರೇನರ್ ಆಗಿ ಗುರುತಿಸಿಕೊಂಡಿದ್ದಾರೆ. ರಾಜ್ಯ 25 ಅಲೆಮಾರಿ ಸಮುದಾಯಗಳ ಮೇಲೆ ವಿಶೇಷ ಅಧ್ಯಯನ ಮಾಡಿ ದಾಖಲೀಕರಣ ಮಾಡಿದ್ದು, ಇವರ ವಿಶೇಷ ಸಾಧನೆಯಾಗಿದೆ. ಇದೇ ಅವರ ಮೊದಲ ಹನುಮಸಾಗರ ಸಾರ್ವಜನಿಕರು, ಜನಪ್ರತಿನಿಧಿಗಳು, ಮಾತೃ ಶಾಲೆಯ ಶಿಕ್ಷಕರು ಸಂತಸ ವ್ಯಕ್ತಪಡಿಸಿದ್ದಾರೆ.
ಹನುಮಸಾಗರ ಗ್ರಾಮಕ್ಕೆ ದೊರೆತ ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ, ಇದು ಇಲ್ಲಿ ನಾನು ಕೇವಲ ನಿಮಿತ್ಯ ಮಾತ್ರ. ಗ್ರಾಮದ ಎಲ್ಲಾ ಗುರು ಹಿರಿಯರ ಹಾಗೂ ಸ್ನೇಹಿತರ ಹಾರೈಕೆಯ ಪ್ರತಿಫಲವೇ ನನ್ನನ್ನು ರಾಜ್ಯ ಮಟ್ಟದ ಶಿಕ್ಷಕ ಎಂದು ಗುರುತಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ನನಗೆ ದೊರೆತ ಮೊದಲ ರಾಜ್ಯ ಮಟ್ಟದ ಪ್ರಶಸ್ತಿಯಾಗಿದೆ ಎಂದು ಲೇಖಕ, ಶಿಕ್ಷಕ ಕಿಶನ್‌ರಾವ್ ಕುಲಕರ್ಣಿ ಸಂತಸ ಹಂಚಿಕೊಂಡಿದ್ದಾರೆ.
ಓದಿ: ವಿಜಯಪುರ ಜಿಲ್ಲೆಯಲ್ಲಿ ಭೂಕಂಪನದ ಅನುಭವ... ಮನೆಯಿಂದ ಹೊರಗೆ ಬಂದ ಜನರು!