ಕೊಪ್ಪಳ: ದೇಶದಲ್ಲಿ ರಾಮಭಕ್ತರು ಎಷ್ಟಿದ್ದಾರೆಯೋ ಅಷ್ಟೇ ಪ್ರಮಾಣದಲ್ಲಿ ಹನುಮ ಭಕ್ತರೂ ಇದ್ದಾರೆ ಎಂದು ರಾಜ್ಯಪಾಲ ವಜುಭಾಯ್ ವಾಲಾ ಹೇಳಿದರು.
ತಮ್ಮ ಸ್ವಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ಆಂಜನೇಯ ದೇವಸ್ಥಾನಕ್ಕೆ ಅಂಜನಾದ್ರಿಯಿಂದ ಕಳಿಸಿಕೊಡುತ್ತಿರುವ ಶಿಲೆಗೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ದೇಶದಲ್ಲಿ ರಾಮ ಭಕ್ತರು ಎಷ್ಟಿದ್ದಾರೆಯೋ ಅಷ್ಟೇ ಪ್ರಮಾಣದಲ್ಲಿ ಹನುಮ ಭಕ್ತರೂ ಇದ್ದಾರೆ. ಕೋಟ್ಯಂತರ ಭಕ್ತರು ಹನುಮನಿಗೆ ನಿತ್ಯ ಪೂಜೆ ಸಲ್ಲಿಸುತ್ತಾರೆ ಎಂದರು.
ಓದಿ: ರಾಧಿಕಾ ಕುರಿತ ಪ್ರಶ್ನೆಗೆ ‘ಯಾರಪ್ಪ ಅವರೆಲ್ಲ? ಅದ್ಯಾರೋ ನಂಗೊತ್ತಿಲ್ಲ’ ಎಂದ ಹೆಚ್.ಡಿ.ಕುಮಾರಸ್ವಾಮಿ!
ನಮ್ಮ ಸ್ವಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ಆಂಜನೇಯನ ದೇವಸ್ಥಾನಕ್ಕೆ ಹನುಮ ಜನಿಸಿದ ಪವಿತ್ರ ಸ್ಥಳವಾದ ಈ ಅಂಜನಾದ್ರಿ ಪರ್ವತದ ಶಿಲೆಯನ್ನು ಪೂಜೆ ಮಾಡಿ ತೆಗೆದುಕೊಂಡು ಹೋಗಲಾಗುತ್ತಿದೆ. ಇದನ್ನು ಅಲ್ಲಿ ನಿರ್ಮಾಣವಾಗುತ್ತಿರುವ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲಾಗುತ್ತದೆ ಎಂದು ಹೇಳಿದರು.
ನಿಷ್ಕಲ್ಮಶವಾಗಿ ನಿನ್ನ ಕೆಲಸವನ್ನು ನೀನು ಮಾಡು. ಅದರ ಪ್ರತಿಫಲವನ್ನು ಭಗವಂತನಿಗೆ ಬಿಡು ಎಂಬ ಉದಾತ್ತ ಮಾತನ್ನು ಪಾಲಿಸಬೇಕು. ಶ್ರೀರಾಮಚಂದ್ರನ ಆದರ್ಶವೇ ನಮಗೆಲ್ಲ ಪ್ರೇರಣೆ ಎಂದ ಅವರು, ದೇವಸ್ಥಾನ ಅರ್ಚಕರ ವಿವಾದ ವಿಚಾರ ಕುರಿತು ನಾನು ಪ್ರತಿಕ್ರಿಯಿಸಲಾರೆ. ಇಲ್ಲಿನ ಆಡಳಿತ ಅದನ್ನು ಬಗೆಹರಿಸುತ್ತದೆ ಎಂದರು.