ಕೊಪ್ಪಳ: ರಾಜಕೀಯದಲ್ಲಿ ನಮ್ಮ ಸ್ಥಾನಕ್ಕೆ ತಕ್ಕಂತೆ ನಮ್ಮ ಮಾತುಗಳು ಇರಬೇಕು. ಅಂದಾಗ ಮಾತ್ರ ಜನರು ಗೌರವ ಕೊಡುತ್ತಾರೆ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆ ಸಚಿವ ಹಾಲಪ್ಪ ಆಚಾರ್ ಹೇಳಿದರು.
ಕೊಪ್ಪಳದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಆರ್ಎಸ್ಎಸ್ ತಾಲಿಬಾನಿ ಸಂಸ್ಕೃತಿ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಈ ಕುರಿತು ಸಿಎಂ ಬಸವರಾಜ ಬೊಮ್ಮಾಯಿ ಅವರು ಈಗಾಗಲೇ ಪ್ರತಿಕ್ರಿಯೆ ನೀಡಿದ್ದಾರೆ. ಹೀಗಾಗಿ ಆ ಬಗ್ಗೆ ನಾನು ಪ್ರತಿಕ್ರಿಯೆ ನೀಡುವ ಅವಶ್ಯಕತೆ ಇಲ್ಲ ಎಂದು ಭಾವಿಸಿದ್ದೇನೆ ಎಂದರು.
ರಾಜಕೀಯಲ್ಲಿ ನಮ್ಮ ಸ್ಥಾನಕ್ಕೆ ತಕ್ಕಂತೆ ನಮ್ಮ ಮಾತು ಇರಬೇಕು. ಅಂದಾಗ ಮಾತ್ರ ಜನ ನಮಗೆ ಗೌರವ ಕೊಡುತ್ತಾರೆ. ಇದನ್ನು ನಾನು ತಿಳಿದುಕೊಂಡಿದ್ದೇನೆ. ಅವರು ಸಹ ತಿಳಿದುಕೊಳ್ಳಬೇಕು ಎಂದು ಸಿದ್ದರಾಮಯ್ಯಗೆ ಟಾಂಗ್ ನೀಡಿದರು.
ಕುಷ್ಟಗಿ ತಾಲೂಕಿನ ಮಿಯಾಪೂರದಲ್ಲಿ ದಲಿತ ಬಾಲಕ ದೇವಸ್ಥಾನ ಪ್ರವೇಶ ಮಾಡಿದ್ದಕ್ಕೆ ದಂಡ ಹಾಕಿದ ಪ್ರಕರಣ ಕುರಿತಂತೆ ಪ್ರತಿಕ್ರಿಯಿಸಿದ ಅವರು, ಇದು ನಿಜಕ್ಕೂ ತಲೆ ತಗ್ಗಿಸುವ ಕೆಲಸ. ಇದನ್ನು ನಾವೂ ಒಪ್ಪುವುದಿಲ್ಲ. ಬಸವಣ್ಣನವರು 12ನೇ ಶತಮಾನದಲ್ಲೇ ಅಸ್ಪೃಶ್ಯತೆ ಬಗ್ಗೆ ಹೋರಾಡಿದ್ದರು. ಇನ್ನು ಇಂತಹ ಘಟನೆ ನಡೆಯುತ್ತಿರುವುದು ನಿಜಕ್ಕೂ ಬೇಸರದ ಸಂಗತಿ. ಈ ಕುರಿತು ಈಗಾಗಲೇ ಅಧಿಕಾರಿಗಳು ಕಾನೂನು ಕ್ರಮ ಕೈಗೊಂಡಿದ್ದಾರೆ. ಕೇವಲ ಕಾನೂನಿಂದ ಸುಧಾರಣೆ ತರಲು ಸಾಧ್ಯವಿಲ್ಲ, ನಾವೆಲ್ಲ ಮೌಢ್ಯದಿಂದ ಹೊರ ಬರಬೇಕು ಎಂದರು.