ಕೊಪ್ಪಳ: ಸರ್ಕರಿ ಮೀಸಲಾತಿ ಪಡೆಯಲು ಅರ್ಹರಲ್ಲದವರನ್ನು ಪಟ್ಟಿಗೆ ಸೇರಿಸಿ ಮೀಸಲಾತಿ ದೋಚುವ ಕೆಲಸ ನಡೆಯುತ್ತಿದೆ ಎಂದು ಮಾಜಿ ಸಚಿವ, ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜಿಲ್ಲೆ ಕುಕನೂರು ತಾಲೂಕಿನ ಕುದುರೆಮೋತಿ ಗ್ರಾಮದಲ್ಲಿ ಮಾತನಾಡಿದ ಅವರು, ಕೆಲವು ಸ್ವಾಮೀಜಿಗಳು ಮೀಸಲಾತಿ ವಿಷಯದಲ್ಲಿ ಕಾನೂನು ಮೀರಿ ವರ್ತಿಸುತ್ತಿದ್ದಾರೆ. ಹನ್ನೆರಡನೇ ಶತಮಾನದಲ್ಲಿ ಬಸವಣ್ಣನವರು ಈ ಮೀಸಲಾತಿ ವ್ಯವಸ್ಥೆಯನ್ನು ವಿರೋಧಿಸಿ ಸಮಾನತೆ ಸಾರಿದ್ದರು. ಈಗಿನ ಸ್ವಾಮಿಜಿಗಳೆಲ್ಲ ಬಸವಣ್ಣನವರ ಆಶಯಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ಅಂದರೆ, ಅವರೆಲ್ಲ ಬಸವಣ್ಣನ ವಿರೋಧಿಗಳೇ ಎಂದು ನಾವು ತಿಳಿಯಬೇಕಾಗುತ್ತದೆ ಎಂದು ಬಸವ ಜಯ ಮೃತ್ಯುಂಜಯ ಸ್ವಾಮೀಜಿಗೆ ತಿರುಗೇಟು ನೀಡಿದರು.
ಎಸ್ಸಿ ಮೀಸಲಾತಿ ಕೇಳುತ್ತಿರುವ ಬಿ.ಡಿ. ಹಿರೇಮಠ ನಡೆ ಸರಿಯಾದುದಲ್ಲ. ಹಾಗೊಂದು ವೇಳೆ ಅವರಿಗೆ ಎಸ್ಸಿ ಮೀಸಲಾತಿ ನೀಡಲೇಬೇಕು ಎಂದಾದಲ್ಲಿ ಬಿ.ಡಿ. ಹಿರೇಮಠಗೆ ನೇರವಾಗಿ ನಾನೊಂದು ಸವಾಲು ಹಾಕುತ್ತೇನೆ. ಎಸ್ಸಿ ಮೀಸಲಾತಿ ಕೇಳುವ ಜಂಗಮರು ನಾವು ತಿನ್ನುವ ಆಹಾರ ತಿನ್ನಬೇಕು ಎಂದು ಸವಾಲು ಹಾಕಿದರು. ಊರಲ್ಲಿರೋ ಕುರುಬರಿಗೆಲ್ಲ ಎಸ್ಟಿ ಮೀಸಲಾತಿ ನೀಡುವುದು ಸರಿಯಲ್ಲ. ಅದರಲ್ಲಿ ಅರ್ಹ ಜೇನು, ಕಾಡು ಕುರುಬರಿಗೆ ಎಸ್ಟಿ ಮೀಸಲಾತಿ ನೀಡಬೇಕು ಎಂದು ಒತ್ತಾಯಿಸಿದರು.
ಎಚ್.ವಿಶ್ವನಾಥ್ ಮಗ ಕಾಂಗ್ರೆಸ್ ಸೇರ್ಪಡೆ ವಿಚಾರಕ್ಕೆ ಪ್ರತ್ರಿಕ್ರಿಯಿಸಿ, ನನ್ನ ಮಗನಿಗೆ ಈಗ 38 ವರ್ಷ ವಯಸ್ಸು, ಆತನಿಗೆ ತನ್ನ ಭವಿಷ್ಯ ಕುರಿತು ನಿರ್ಧಾರ ಕೈಗೊಳ್ಳುವ ಸ್ವಾತಂತ್ರ್ಯ ಇದೆ ಇದರಲ್ಲಿ ನನ್ನ ಹಸ್ತಕ್ಷೇಪ ಇಲ್ಲ ಎಂದು ಹೇಳಿದರು. ಇನ್ನು ಸಿದ್ದರಾಮಯ್ಯ ಅಮೃತ ಮಹೋತ್ಸವ ಕುರಿತು ಪ್ರತ್ರಿಕ್ರಿಯಿಸಿ, ಅವರು 75ನೇ ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿದ್ದು ತಪ್ಪಿಲ್ಲ. ಆದರೇ ರಾಜ್ಯದ ಇಡೀ ಕುರುಬ ಜನಾಂಗ ತಮ್ಮೊಂದಿಗೆ ಇದೆ ಎಂದು ಹೇಳಿದ್ದು ತಪ್ಪು. ರಾಜ್ಯದ ಎಲ್ಲ ಕುರುಬರು ಸಿದ್ದರಾಮಯ್ಯ ಜೊತೆಗೆ ಇಲ್ಲ ಎಂದು ವಿಶ್ವನಾಥ್ ಹೇಳಿದರು.
ಇದನ್ನೂ ಓದಿ: ಮೋದಿ ಸ್ವಾತಂತ್ರ್ಯ ಬಂದ ನಂತರ ಹುಟ್ಟಿದವರು, ಇವರ ದೇಶಪ್ರೇಮ ತೋಳ-ಕುರಿಮರಿ ಕತೆ: ಸಿದ್ದರಾಮಯ್ಯ