ಕೊಪ್ಪಳ: ಮದ್ಯದಂಗಡಿಗಳಿಂದ ಬೇಸತ್ತ ಜಿಲ್ಲೆಯ ಕಾರಟಗಿ ತಾಲೂಕಿನ ಗುಡೂರು ಗ್ರಾಮದ ಮಹಿಳೆಯರು ತಮ್ಮೂರಿನಲ್ಲಿ ಮದ್ಯ ಮಾರಾಟ ನಿಷೇಧಿಸುವಂತೆ ಆಗ್ರಹಿಸಿದ್ದಾರೆ.
ಗುಡೂರಿನಿಂದ ಕೊಪ್ಪಳ ಜಿಲ್ಲಾಧಿಕಾರಿ ಕಚೇರಿಗೆ ಬಂದ ಮಹಿಳೆಯರು ತಮ್ಮ ಅಳಲು ತೋಡಿಕೊಂಡಿದ್ದಾರೆ. ಸುಮಾರು 400 ಮನೆಗಳಿರುವ ತಮ್ಮ ಗ್ರಾಮದಲ್ಲಿ 9 ಕ್ಕೂ ಹೆಚ್ಚು ಮದ್ಯದ ಅಂಗಡಿಗಳು ಇವೆ. ಇದರಿಂದ ಸಣ್ಣ ಸಣ್ಣ ಮಕ್ಕಳು ಸಹ ಕುಡಿತದ ದಾಸರಾಗುತ್ತಿದ್ದಾರೆ. ಬಹಳಷ್ಟು ಪುರುಷರು ಕುಡಿತದ ಚಟಕ್ಕೆ ಅಂಟಿಕೊಂಡು ಮನೆಯಲ್ಲಿನ ಮಹಿಳೆಯರನ್ನು ಥಳಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಹೆಣ್ಣು ಮಕ್ಕಳು ದುಡಿದು ತಂದಂತಹ ಕೂಲಿ ಹಣವನ್ನು ಸಹ ಕಸಿದುಕೊಂಡು ಗಂಡಸರು ಕುಡಿದು ಬರುತ್ತಿದ್ದಾರೆ. ಕುಡಿತದ ಹಣಕ್ಕೆ ಮಕ್ಕಳನ್ನು ಶಾಲೆ ಬಿಡಿಸಿ ಕೂಲಿ ಕೆಲಸಕ್ಕೆ ದಬ್ಬುತ್ತಿದ್ದಾರೆ. ಇದರಿಂದಾಗಿ ಮಹಿಳೆಯರಿಗೆ ನೆಮ್ಮದಿ ಇಲ್ಲದಂತಾಗಿದೆ. ಹೀಗಾಗಿ ಗುಡೂರಿನಲ್ಲಿ ಮದ್ಯ ಮಾರಾಟ ಸಂಪೂರ್ಣ ನಿಷೇಧಿಸಬೇಕು ಎಂದು ಮಹಿಳೆಯರು ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ.