ಗಂಗಾವತಿ: ತಾಲೂಕಿನ ಸಣಾಪುರದಿಂದ ಸಂಗಾಪುರದವರೆಗೆ ನಡೆಯುತ್ತಿರುವ ಕಾಲುವೆ ಕಾಮಗಾರಿಗೆ ಬೇಕಾಗುವ ಮೊರಂನ್ನು ಗುತ್ತಿಗೆದಾರರು ಅಕ್ರಮವಾಗಿ ತಾಲೂಕಿನ ಬಂಡಿಬಸಪ್ಪ ಕ್ಯಾಂಪಿನ ರುದ್ರಭೂಮಿಯಿಂದ ತೆಗೆದುಕೊಂಡು ಹೋಗುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ.
ಸಂಗಾಪುರ ಬಳಿ ನಡೆಯುತ್ತಿರುವ ಕಾಮಗಾರಿಗೆ ಜಿಲ್ಲಾಡಳಿತ ನಿರ್ದಿಷ್ಟ ಪ್ರದೇಶದಿಂದ ಮೊರಂ ತೆಗೆದುಕೊಳ್ಳುವಂತೆ ಸೂಚನೆ ನೀಡಿದ್ದರೂ ಕೂಡ ಗುತ್ತಿಗೆದಾರರು ಅಕ್ರಮವಾಗಿ ಗ್ರಾಮದ ಸ್ಮಶಾನ ಭೂಮಿಯಿಂದ ಮೊರಂ ಸಾಗಿಸುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಬಂಡಿಬಸಪ್ಪ ಕ್ಯಾಂಪಿನಲ್ಲಿರುವ ಎರಡು ಎಕರೆ ಸಾರ್ವಜನಿಕ ರುದ್ರಭೂಮಿಯ ಪೈಕಿ ಈಗಾಗಲೇ ಸುಮಾರು ಅರ್ಧ ಎಕರೆಗೂ ಹೆಚ್ಚು ಪ್ರದೇಶದ ರುದ್ರಭೂಮಿಯನ್ನು ಅಗೆದು ಮಣ್ಣು ಸಾಗಿಸಲಾಗಿದೆ. ಹೂತಿದ್ದ ಕಳೇಬರಗಳನ್ನು ಪಕ್ಕಕ್ಕೆ ಸರಿಸಿ ಮೊರಂ ಸಾಗಿಸಲಾಗುತ್ತಿದೆ. ಈ ಬಗ್ಗೆ ತಹಶೀಲ್ದಾರ್ ಅವರಿಗೆ ಕರೆ ಮಾಡಿದರೂ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಗ್ರಾಮದ ಯುವಕರು ದೂರಿದ್ದಾರೆ.