ಗಂಗಾವತಿ: ಸಿಎಂ ಯಡಿಯೂರಪ್ಪ ಅವರ ರಾಜಕೀಯದ ಪ್ರತಿ ಏಳು-ಬೀಳಿನ ಹಿಂದೆ ಹನುಮನ ಅಭಯವಿದೆ. ಅದು ಶಿಕಾರಿಪುರದ ಹನುಮನಾಗಿರಬಹುದು ಅಥವಾ ಅಂಜನಾದ್ರಿ ಹನುಮನಿರಬಹುದು ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ತಾಲೂಕಿನ ಚಿಕ್ಕರಾಂಪುರದ ಅಂಜನಾದ್ರಿ ಬೆಟ್ಟದ ಸಮೀಪ ಬಿಜೆಪಿ ಪಕ್ಷದಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ಕುಟುಂಬದ ಮನೆ ದೇವರು ಹನುಮ. ಹೀಗಾಗಿ ಕಳೆದೆರಡು ಬಾರಿ ಬೆಟ್ಟ ಹತ್ತುವ ಉದ್ದೇಶ ಇತ್ತು. ಆದರೆ ಕೊರೊನಾ ಮತ್ತು ನಾನಾ ಕಾರಣಕ್ಕೆ ಅದು ಸಾಧ್ಯವಾಗಿರಲಿಲ್ಲ. ಆದರೆ ಮೂರನೇ ಯತ್ನದಲ್ಲಿ ಬೆಟ್ಟ ಹತ್ತಲು ಅವಕಾಶ ಸಿಕ್ಕಿದೆ. ಹಿಂದುಗಳಿಗೆ ಉತ್ತರ ಭಾರತದ ಅಯೋಧ್ಯೆ ಎಷ್ಟು ಮುಖ್ಯವೋ, ದಕ್ಷಿಣದಲ್ಲಿ ಅಂಜನಾದ್ರಿಯೂ ಅಷ್ಟೆ ಮುಖ್ಯ ಎಂದರು.
ಓದಿ: ಹೆಚ್ ವಿಶ್ವನಾಥ್ ವಿರುದ್ಧ ಗುಡುಗಿದ ಬಿ.ವೈ.ವಿಜಯೇಂದ್ರ
ಕಾಂಗ್ರೆಸ್ ಈಗಾಗಲೇ ದೇಶದಲ್ಲಿ ಸೂತ್ರವಿಲ್ಲದ ಗಾಳಿಪಟದಂತಾಗಿದೆ. ರಾಮ ಮಂದಿರದ ವಿಚಾರಕ್ಕೆ ಬಂದರೆ ಶಾಶ್ವತವಾಗಿ ಜನರಿಂದ ಕಾಂಗ್ರೆಸ್ಸಿಗರು ದೂರವಾಗಲಿದ್ದಾರೆ ಎಂದು ಟೀಕಿಸಿದರು.
ರಾಜ್ಯದಲ್ಲಿ ನಡೆದ 15 ಉಪ ಚುನಾವಣೆಗಳಲ್ಲಿ ಈಗಾಗಲೇ 12 ಕ್ಕೂ ಹೆಚ್ಚು ಕ್ಷೇತ್ರ ಬಿಜೆಪಿಗೆ ದೊರಕಿವೆ. ಮುಂದಿನ ದಿನಗಳಲ್ಲಿ ಬಸವಕಲ್ಯಾಣ, ಮಸ್ಕಿಯಲ್ಲೂ ಬಿಜೆಪಿ ಜಯಭೇರಿ ಬಾರಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.