ಗಂಗಾವತಿ: ಕೋವಿಡ್ - ಲಾಕ್ಡೌನ್ ಹಿನ್ನೆಲೆ ಒಂದೊತ್ತಿನ ಊಟಕ್ಕೂ ಪರದಾಡುತ್ತಿರುವ ಅದೆಷ್ಟೋ ಮಂದಿಯ ಸಂಕಷ್ಟಕ್ಕೆ ಮಿಡಿದ ಸಮಾನ ಮನಸ್ಕ ವಿದ್ಯಾರ್ಥಿಗಳು, ಸ್ವಯಂ ಪ್ರೇರಣೆಯಿಂದ ವಂತಿಗೆ ಸಂಗ್ರಹಿಸಿ ನೂರಾರು ಜನರಿಗೆ ಆಹಾರ ವಿತರಿಸಿ ಮಾನವೀಯತೆ ಮೆರೆದಿದ್ದಾರೆ.
ನಗರದ ನವಜೀವನ ಟ್ರಸ್ಟ್ ಎಂಬ ಸಂಘಟನೆಯಲ್ಲಿ ಬಹುತೇಕ ವಿದ್ಯಾರ್ಥಿಗಳಿದ್ದು, ತಮ್ಮ ಕೈಲಾದಷ್ಟು ಹಣ ಸಂಗ್ರಹಿಸಿ ನಿರ್ಗತಿಕರು, ಬಡವರು, ಬೀದಿಬದಿಯ ಭಿಕ್ಷುಕರಿಗೆ ಆಹಾರ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ತಂಡದಲ್ಲಿರುವ ಬಹುತೇಕ ಸದಸ್ಯರು ಇನ್ನು ವಿದ್ಯಾರ್ಥಿ ಹಂತದಲ್ಲಿದ್ದಾರೆ. ರಾಜ್ಯದ ನಾನಾ ಜಿಲ್ಲೆಗಳಲ್ಲಿ ವೃತ್ತಿಪರ ಕೋರ್ಸ್ಗಳನ್ನು ಕಲಿಯುತ್ತಿರುವ ಸಮಾನ ಮನಸ್ಕರು ಒಂದು ವೇದಿಕೆಯಡಿ ಬಂದು ಕಳೆದ ವರ್ಷದಿಂದ ನಾನಾ ಸಾಮಾಜಿಕ ಚಟುವಟಿಕೆ ಕೈಗೊಳ್ಳುವ ಮೂಲಕ ಗಮನ ಸೆಳೆಯುತ್ತಿದ್ದಾರೆ.
ಇದನ್ನೂ ಓದಿ: ಬೆಣ್ಣೆ ನಗರಿಯಲ್ಲಿ ಕೋವಿಡ್ ಉಲ್ಬಣ : ಸ್ಟೀಂ ಮೊರೆ ಹೋದ ಪೊಲೀಸರು!
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನವಜೀವನ ಟ್ರಸ್ಟ್ ಅಧ್ಯಕ್ಷ ಸಂದೀಪ್ ಜೋಶಿ, ಇದೀಗ ಲಾಕ್ಡೌನ್ ಹಿನ್ನೆಲೆ, ಆಹಾರದ ಅಗತ್ಯಯುಳ್ಳವರನ್ನು ಈಗಾಗಲೇ ಗುರುತಿಸಿದ್ದೇವೆ. ಅವರಿಗೆ ನಿತ್ಯವೂ ನಾವೇ ಖುದ್ದು ಹೋಗಿ ಆಹಾರ ನೀಡುತ್ತೇವೆ. ಲಾಕ್ಡೌನ್ ಮುಗಿಯುವರೆಗೂ ನಮ್ಮ ಕಾರ್ಯಾಚರಣೆ ಇರುತ್ತದೆ ಎಂದರು.