ಗಂಗಾವತಿ: ನಗರದಲ್ಲಿ ಮಧ್ಯರಾತ್ರಿ ಎರಡು ಗಂಟೆಗೆ ಜನರು ಲಾಕ್ಡೌನ್ ಉಲ್ಲಂಘಿಸಿ ಬೀದಿಗೆ ಬರುತ್ತಿರುವ ಆತಂಕಕಾರಿ ಘಟನೆ ಬೆಳಕಿಗೆ ಬಂದಿದ್ದು, ಈ ಕುರಿತು ಪೊಲೀಸ್ ಗಮನಿಸದೇ ಇರುವುದು ವಿಪರ್ಯಾಸವಾಗಿದೆ.
ಮಧ್ಯರಾತ್ರಿ ಎರಡು ಗಂಟೆಗೆ ತರಕಾರಿ, ಹಣ್ಣಿನ ಮಾರುಕಟ್ಟೆ ಆರಂಭವಾಗುತ್ತಿದ್ದು, ಜನ ಮುಗಿಬಿದ್ದು ಖರೀದಿಸುತ್ತಿದ್ದಾರೆ. ಇಲ್ಲಿನ ಮಹಾತ್ಮಗಾಂಧಿ ವೃತ್ತ, ಮಹಾವೀರ ಸರ್ಕಲ್ ನಲ್ಲಿರುವ ಬಹುತೇಕ ಬಟ್ಟೆ, ಫ್ಯಾನ್ಸಿಸ್ಟೋರ್, ಎಲೆಕ್ಟ್ರಿಕಲ್ ಅಂಗಡಿ ಆರಂಭವಾಗುತ್ತಿದೆ. ಬೆಳಗ್ಗೆ ಐದು ಗಂಟೆಗೆಲ್ಲ ವ್ಯಾಪಾರ ವಹಿವಾಟು ಬಂದಾಗುತ್ತಿರುವ ವಿಲಕ್ಷಣ ಲಾಕ್ಡೌನ್ ಉಲ್ಲಂಘಿಸುತ್ತಿರುವ ಘಟನೆ ಜರುಗುತ್ತಿದೆ.
ಪೊಲೀಸರು ಬೆಳಗ್ಗೆ ಐದು ಗಂಟೆಯ ಬಳಿಕ ಕರ್ತವ್ಯಕ್ಕೆ ಬರುತ್ತಿದ್ದು, ಅಷ್ಟರೊಳಗಾಗಲೆ ಬಹುತೇಕ ಎಲ್ಲ ವಹಿವಾಟುಗಳನ್ನು ವರ್ತಕರು ಮುಗಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಯಾವುದೇ ಕೊರೊನಾ ಪಾಸಿಟಿವ್ ಕೇಸ್ ಇಲ್ಲ ಎಂಬ ಒಂದೇ ಕಾರಣಕ್ಕೆ ಜನ ಅನಾಗತ್ಯವಾಗಿ ನಗರದ ರಸ್ತೆಗಳಲ್ಲಿ ಓಡಾಡುತ್ತಿದ್ದಾರೆ. ಕಳೆದ ಹಲವು ದಿನನಗಳಿಂದ ಅದೇಕೋ ಪೊಲೀಸರು ಕೂಡ ಜನರಿಗೆ ಕೊಂಚ ರಿಲಾಕ್ಸ್ ಕೊಟ್ಟಂತೆ ಕಾಣುತ್ತಿದೆ.