ಗಂಗಾವತಿ: ಇಲ್ಲಿನ ಉಪವಿಭಾಗ ಸರ್ಕಾರಿ ಆಸ್ಪತ್ರೆಗೆ 2021-22ನೇ ಸಾಲಿನ ಕೇಂದ್ರ ಸರ್ಕಾರದ ಕಾಯಕಲ್ಪ ಪ್ರಶಸ್ತಿ ಲಭಿಸಿದ್ದು, ಸತತ ಮೂರು ಬಾರಿ ಈ ಪ್ರಶಸ್ತಿ ಪಡೆದ ರಾಜ್ಯದ ಏಕೈಕ ಸರ್ಕಾರಿ ಆಸ್ಪತ್ರೆಯಾಗಿ ದಾಖಲೆ ಬರೆದಿದೆ. ರಾಜ್ಯದ ಆರೋಗ್ಯ ಇಲಾಖೆಯ ಇತಿಹಾಸದಲ್ಲೇ ಗಂಗಾವತಿ ಆಸ್ಪತ್ರೆ ಐತಿಹಾಸಿಕ ಸಾಧನೆ ಮಾಡಿದೆ.
ಸರ್ಕಾರಿ ಆಸ್ಪತ್ರೆಗಳಲ್ಲಿ ಜನರಿಗೆ ನೀಡುತ್ತಿರುವ ಗುಣಾತ್ಮಕ ಸೇವೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶಕ್ಕೆ ಕೇಂದ್ರ ಸರ್ಕಾರ ಕಾಯಕಲ್ಪ ಪ್ರಶಸ್ತಿ ಜಾರಿಗೆ ತಂದಿದೆ. ಈ ಪ್ರಶಸ್ತಿ 15 ಲಕ್ಷ ರೂಪಾಯಿ ನಗದು ಮತ್ತು ಪಾರಿತೋಷಕ ಒಳಗೊಂಡಿದೆ. ಪ್ರಸಕ್ತ ಸಾಲಿನಲ್ಲಿ ಅನುಸರಿಸಲಾದ ಮಾನದಂಡದ ಪೈಕಿ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ಆಸ್ಪತ್ರೆಯನ್ನು (96.42 ಅಂಕ) ಹಿಂದಿಕ್ಕಿದ ಗಂಗಾವತಿ ಉಪ ವಿಭಾಗ ಆಸ್ಪತ್ರೆ (98.58 ಅಂಕ) ಪ್ರಶಸ್ತಿಯನ್ನು ದಕ್ಕಿಸಿಕೊಂಡಿದೆ.
ಗಂಗಾವತಿ ಉಪ ವಿಭಾಗ ಆಸ್ಪತ್ರೆಗೆ 2017- 18, 2018- 19ರಲ್ಲಿ ಎರಡು ಬಾರಿ ಕಾಯಕಲ್ಪ ಪ್ರಶಸ್ತಿ ಸಿಕ್ಕಿತ್ತು. 2019- 20ರಲ್ಲಿ ಕೋವಿಡ್ ಕಾರಣಕ್ಕೆ ಪ್ರಶಸ್ತಿ ಘೋಷಣೆಯಾಗಲಿಲ್ಲ. ಇದೀಗ 2021- 22 ಸಾಲಿನಲ್ಲಿ ಮತ್ತೆ ಗಂಗಾವತಿ ಆಸ್ಪತ್ರೆಗೆ ಪ್ರಶಸ್ತಿ ಲಭಿಸಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಉಪವಿಭಾಗ ಆಸ್ಪತ್ರೆಯ ವೈದ್ಯಾಧಿಕಾರಿ ಈಶ್ವರ ಸವುಡಿ, ಮೂರನೇ ಬಾರಿಗೆ ಕೇಂದ್ರ ಸರ್ಕಾರದ ಪ್ರಶಸ್ತಿ ಪಡೆಯುತ್ತಿರುವ ರಾಜ್ಯದ ಏಕೈಕ ಆಸ್ಪತ್ರೆಯಾಗಿದೆ. ಈ ಸಾಧನೆಯ ಹಿಂದೆ ಆಸ್ಪತ್ರೆಯ ಎಲ್ಲಾ ವಿಭಾಗದ ಸಿಬ್ಬಂದಿಯ ಶ್ರಮವಿದೆ ಎಂದರು.
ಇದನ್ನೂ ಓದಿ: ಸಿಎಂ ತವರು ಜಿಲ್ಲೆಯಲ್ಲಿ 85ನೇ ಕನ್ನಡ ಸಾಹಿತ್ಯ ಸಮ್ಮೇಳನ: ಮುಹೂರ್ತ ಫಿಕ್ಸ್