ಗಂಗಾವತಿ: ಯಾವುದೇ ಡ್ರಾಯಿಂಗ್ ಕ್ಲಾಸ್ಗೂ ಹೋಗದೆ ವೃತ್ತಿಪರ ಚಿತ್ರ ಕಲಾಕಾರರೇ ಶಹಬ್ಬಾಶ್ ಎನ್ನುವ ರೀತಿಯಲ್ಲಿ ತಾಲೂಕಿನ ಯುವ ಪ್ರತಿಭೆಯೊಬ್ಬ ಕಲಾಕೃತಿಗಳ ಮೂಲಕ ಗಮನ ಸೆಳೆಯುತ್ತಿದ್ದಾನೆ.
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಆನೆಗೊಂದಿ ಗ್ರಾಮದ ಪಿ. ವಿನೋದ್ ಕುಮಾರ ಈ ಸಾಧನೆಗೈದ ಯುವಕ. ಮೂಲತಃ ಹೌಸ್ ಕೀಪಿಂಗ್ ಮ್ಯಾನೇಜರ್ ಆಗಿ ಕೆಲಸ ಮಾಡುವ ಇವರು ಬಿಡುವಿನ ಸಮಯದಲ್ಲಿ ಟೂರಿಸ್ಟ್‌ಗಳಿಗೆ ಗೈಡ್ ಆಗಿ ಕೆಲಸ ಮಾಡುತ್ತಿದ್ದರು.
ಕಳೆದ ವರ್ಷದ ಲಾಕ್ಡೌನ್ ಸಂದರ್ಭದಲ್ಲಿ ಕೆಲಸವಿಲ್ಲದೆ ಮನೆಯಲ್ಲಿದ್ದ ವಿನೋದ್ ಸಮಯ ದೂಡಲು ಪೇಂಟಿಂಗ್ ಮಾಡಲು ಶುರು ಮಾಡಿದ್ದಾರೆ. ಕಾಲಕ್ರಮೇಣ ಇಂದು ಹವ್ಯಾಸವಾಗಿದ್ದು, ವೃತ್ತಿಪರ ಪೇಂಟರ್ಸ್ ಆಚ್ಚರಿ ವ್ಯಕ್ತಪಡಿಸುವಂತಹ ಕಲಾಕೃತಿಗಳಿಗೆ ಜನ್ಮ ನೀಡಿದ್ದಾರೆ.
ಮೊಹರಾಂ ಹಬ್ಬದಲ್ಲಿ ಹುಲಿಕುಣಿತದ ವೇಷಧಾರಿಗಳಿಗೆ ಬಣ್ಣ ಬಳಿಯುವ ಹಾಗು ಸಣ್ಣಸಣ್ಣ ಕಲ್ಲುಗಳ ಮೇಲೆ ಬಿಡಿಸುವ ಚಿತ್ತಾರಗಳು ಅತ್ಯಾಕರ್ಷಕವಾಗಿವೆ. ಸದ್ಯ ತನಗೆ ಯಾರಾದರೂ ವೃತ್ತಿಪರ ಕಲಾವಿದರು ಮಾರ್ಗದರ್ಶನ ಮಾಡಿದರೆ ಮತ್ತಷ್ಟು ಸುಧಾರಿಸಿಕೊಳ್ಳುತ್ತೇನೆ ಎನ್ನುತ್ತಾರೆ ವಿನೋದ್.
ಏಕಲವ್ಯನ ಹಾಗೆ ಸ್ವತಃ ಕಲೆಯನ್ನು ಆರಾಧಿಸುತ್ತಿರುವ ಈ ಯುವ ಪ್ರತಿಭೆಗೆ ಸೂಕ್ತ ಮಾರ್ಗದರ್ಶನ ಸಿಕ್ಕರೆ ಉನ್ನತ ಮಟ್ಟಕ್ಕೆ ಬೆಳೆಯಬಲ್ಲರು.