ಕೊಪ್ಪಳ: ಕೊರೊನಾ ತೊಲಗಿಸಲು ಒಂದು ಕಡೆ ವೈದ್ಯಕೀಯ ಲೋಕ ಶ್ರಮಿಸುತ್ತಿದ್ದರೆ, ಮತ್ತೊಂದು ಕಡೆ ಜನರು ದೇವರ ಮೊರೆ ಹೋಗುತ್ತಿದ್ದಾರೆ. ಕೊರೊನಾ ತೊಲಗಲಿ ಎಂದು ಪ್ರಾರ್ಥಿಸಿ ಚಿಣ್ಣರು ದೇವರಿಗೆ ಗಂಗಾಭಿಷೇಕದ ಕೈಂಕರ್ಯ ನಡೆಸುತ್ತಿದ್ದಾರೆ.
ಜಿಲ್ಲೆಯ ಕಾರಟಗಿ ತಾಲೂಕಿನ ಈಳಿಗನೂರು ಗ್ರಾಮದಲ್ಲಿ ಚಿಣ್ಣರು ಪ್ರತಿ ಶುಕ್ರವಾರ ಗ್ರಾಮದಲ್ಲಿರುವ ದೇವರಿಗೆ ಬೆಳಗ್ಗೆ ಮಡಿಯುಡಿಯಿಂದ ಜಲಾಭಿಷೇಕ ಕೈಂಕರ್ಯ ನಡೆಸುತ್ತಿದ್ದಾರೆ. ಈಗಾಗಲೇ ಕಳೆದ ನಾಲ್ಕು ಶುಕ್ರವಾರ ಈ ಕೈಂಕರ್ಯ ನಡೆಸಿರುವ ಚಿಣ್ಣರು ಇಂದು ಐದನೇ ಶುಕ್ರವಾರದ ಗಂಗಾಸ್ನಾನ ಸೇವೆ ನಡೆಸಿದರು.
ಗ್ರಾಮದ ಮಾರುತೇಶ್ವರ, ಸುಂಕ್ಲಮ್ಮ, ದುರಗಮ್ಮ, ಗಾಳೆಮ್ಮ, ಈಶ್ವರ ದೇವಸ್ಥಾನ, ಮಸೀದಿಗೂ ಬೆಳಗಿನ ಜಾವ ತೆರಳಿ ಮಡಿಯಿಂದ ತಂದ ಬಿಂದಿಗೆಯ ಜಲವನ್ನು ದೇವರಿಗೆ ಅಭಿಷೇಕ ಮಾಡುತ್ತಿದ್ದಾರೆ. ಕೊರೊನಾ ಕಂಟಕ ಕಳೆಯಲಿ ಎಂದು ದೇವರಲ್ಲಿ ಪ್ರಾರ್ಥಿಸಿ ಪ್ರತಿ ಶುಕ್ರವಾರ ಈ ಸೇವೆ ಮಾಡುತ್ತಿರುವುದಾಗಿ ಚಿಣ್ಣರು ಹೇಳಿದ್ದಾರೆ. ಚಿಣ್ಣರ ಈ ಕಾರ್ಯಕ್ಕೆ ಗ್ರಾಮಸ್ಥರಲ್ಲಿಯೂ ಆಶ್ಚರ್ಯವುಂಟು ಮಾಡಿದೆ.