ಕೊಪ್ಪಳ : ಪ್ರಧಾನಿ ಮೋದಿ ಹೆಸರಲ್ಲಿ ಯುವಕನೊಬ್ಬ ಮಹಿಳೆಯರಿಗೆ ಪಂಗನಾಮ ಹಾಕಿರುವ ಘಟನೆ ಜಿಲ್ಲೆಯ ಗಂಗಾವತಿ ತಾಲೂಕು ಹಿರೇಡಂಕನಕಲ್ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ಪ್ರಧಾನಿ ಮೋದಿ ಯೋಜನೆಯಿಂದ ಅಕೌಂಟ್ ಗೆ 15 ಲಕ್ಷ ರುಪಾಯಿ ಬರುತ್ತೆ ಎಂದು ಹೇಳಿ, ಉಮೇಶ ಲಿಂಗದಳ್ಳಿ ಎಂಬ ಯುವಕ ಮಹಿಳೆಯರಿಗೆ ವಂಚನೆ ಮಾಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಹಿರೇಡಂಕನಕಲ್ ಗ್ರಾಮದ ಐವರು ಮಹಿಳೆಯರಿಗೆ ಈ ಯುವಕ ಮೋಸ ಮಾಡಿದ್ದಾನೆ ಎನ್ನಲಾಗುತ್ತಿದ್ದು, ಪ್ರಧಾನಿ ಮೋದಿಯವರ ಯೋಜನೆಯಿಂದ ನಿಮ್ಮ ಖಾತೆಗೆ ಹಣ ಬರುವಂತೆ ಮಾಡುವೆ ಎಂದು, ಗೌರಮ್ಮ ಎಂಬ ಮಹಿಳೆಯಿಂದ 35 ಗ್ರಾಂ ಬಂಗಾರ, ಒಂದುವರೆ ಲಕ್ಷ ರೂಪಾಯಿ ಹಣ ಪಡೆದುಕೊಂಡಿದ್ದಾನಂತೆ. ಇದೇ ರೀತಿಯಾಗಿ ಈತ ಗ್ರಾಮದ ಐವರು ಮಹಿಳೆಯರಿಗೆ ಮೋಸ ಮಾಡಿದ್ದಾನೆ ಎಂದು ಹೇಳಲಾಗುತ್ತಿದ್ದು, ಹಣ, ಒಡವೆ ನೀಡಿದ ಮಹಿಳೆಯರು 15 ಲಕ್ಷ ಯಾವಾಗ ಬರುತ್ತೇ ಎಂದು ಕೇಳಿದ್ರೆ, ಬೆದರಿಕೆ ಹಾಕುತ್ತಿದ್ದಾನಂತೆ. ಅಲ್ಲದೆ ಹಣ ಕೇಳಿದ ಕೆಲವರಿಗೆ ಬೌನ್ಸ್ ಆದ ಚೆಕ್ ನೀಡಿದ್ದಾನೆ ಎನ್ನಲಾಗುತ್ತಿದೆ.
ಈಗ ಕೆಲ ದಿನಗಳಿಂದ ಹಣ ಪಡೆದುಕೊಂಡ ಉಮೇಶ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದು, 15 ಲಕ್ಷ ಹಣ ಬರುತ್ತೇ ಎಂದು ಮಗಳ ಮದುವೆಗೆ ಇಟ್ಟಿದ್ದ ಹಣವನ್ನೆಲ್ಲಾ ಕೊಟ್ಟಿದ್ದೇವೆ. ಆದ್ದರಿಂದ ನಮ್ಮ ಹಣ ನಮಗೆ ಕೊಡಿಸಿ ಎಂದು ಮೋಸ ಹೋಗಿರುವ ಗೌರಮ್ಮ ಅಳವತ್ತುಕೊಂಡಿದ್ದಾರೆ.