ಕುಷ್ಟಗಿ: ಮಾಜಿ ಸಿಎಂಗಳ ಜೊತೆ ನಾನೂ ಕೂಡ ಬಿಜೆಪಿ ಸೇರಿದರೆ ಅಚ್ಚರಿ ಪಡಬೇಕಿಲ್ಲ ಎಂದು ಮಾಜಿ ಸಂಸದ ಕೆ.ವಿರುಪಾಕ್ಷಪ್ಪ ಹೇಳಿಕೆ ನೀಡಿದ್ದಾರೆ.
ಬಿಜೆಪಿ ಸೇರುವ ಬಗ್ಗೆ ತೀರ್ಮಾನ ತೆಗೆದುಕೊಂಡಿಲ್ಲ, ಅದರ ಬಗ್ಗೆ ಚರ್ಚೆಯೂ ಇಲ್ಲ. ಸುದ್ದಿಗಳು ಹಾಗೆಯೇ ಇರುತ್ತವೆ, ಅದೇ ರಾಜಕೀಯ ಅಲ್ಲವೇ ಎಂದರು. ನನಗೀಗ 80 ವರ್ಷ. ಈ ವಯಸ್ಸಿನಲ್ಲಿ ಯಾವುದೇ ಪಕ್ಷ ಸೇರಿದರೂ, ಎಂಪಿ, ಎಂಎಲ್ಎ ಸೀಟ್ ಕೇಳುವ ಹಾಗಿಲ್ಲ ಎಂದಾಗ, ಈಶ್ವರಪ್ಪನವರ ಪುತ್ರ ಕೆ.ಕಾಂತೇಶ್ ಕಿಂಗ್ ಮೇಕರ್ ಆಗಬಹುದಲ್ಲ ಎಂದು ಧ್ವನಿಗೂಡಿಸಿದರು.
ಹೋರಾಟದಲ್ಲಿ ಸಿದ್ದು ಭಾಗಿಯಾಗಲ್ಲ:
ಮಾಜಿ ಸಿಎಂ ಸಿದ್ದರಾಮಯ್ಯ ಕುರುಬ ಸಮಾಜಕ್ಕೆ ಎಸ್ಟಿ ಮೀಸಲಾತಿ ಹೋರಾಟದಲ್ಲಿ ಭಾಗವಹಿಸದೇ, ಸೈಲೆಂಟ್ ಆಗಿ ಇರುತ್ತೇನೆ ಎಂದು ಹೇಳಿರುವುದಾಗಿ ಕೆ.ವಿರುಪಾಕ್ಷಪ್ಪ ಹೇಳಿದರು.
ಸಿದ್ದು ಕನಸಲ್ಲೂ RSS ಬರುತ್ತಿದೆ:
ಈ ಹೋರಾಟಕ್ಕೆ ಸ್ವಾಮೀಜಿಗಳು ನೇತೃತ್ವ ವಹಿಸಿದರೆ ಆರ್ಎಸ್ಎಸ್ ಬೆಂಬಲ ಹೇಗಾಗುತ್ತದೆ?. ಸಿದ್ದರಾಮಯ್ಯ ಅವರ ಕನಸಲ್ಲಿ ಆರ್ಎಸ್ಎಸ್ ಬಂದರೆ ನಾವೇನು ಮಾಡಲಿಕ್ಕಾಗದು. ಈ ಸಂಘಟನೆ ನಮ್ಮ ಹೋರಾಟಕ್ಕೆ ಬೆಂಬಲಿಸಿದರೆ ತಪ್ಪೇನು?. ಈ ಹಿಂದೆಯೂ ಹೇಳಿದ್ದೆ, ಈಗಲೂ ಅದನ್ನೇ ಹೇಳುವೆ ಎಂದರು.
ಪರಿಗಣಿಸುವ ವಿಶ್ವಾಸ:
ಕೆ.ಎಸ್.ಈಶ್ವರಪ್ಪ ಅವರು ಈ ಹೋರಾಟದ ಭಾಗವಾಗಿದ್ದು, ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇರುವ ಹಿನ್ನೆಲೆ ನಮ್ಮ ಮನವಿಯನ್ನು ಪರಿಗಣನೆಗೆ ತೆಗೆದುಕೊಳ್ಳುವ ಆಶಾಭಾವನೆ ಇದೆ. ಅಕಸ್ಮಾತ್ ಈ ಬೇಡಿಕೆ ಈಡೇರದೇ ಇದ್ದರೂ ಹೋರಾಟ ಮುಂದುವರೆಯಲಿದೆ. ಈಗಾಗಲೇ ನಾಲ್ವರು ಸ್ವಾಮೀಜಿಗಳ ನೇತೃತ್ವದಲ್ಲಿ ಹೋರಾಟ ಮುಂದುವರೆಯಲಿದೆ ಎಂದರು.