ಕೊಪ್ಪಳ: ಕೊರೊನಾದಂತಹ ಸನ್ನಿವೇಶದಲ್ಲಿ ರಾಜ್ಯ ಸರ್ಕಾರ ಅವ್ಯವಹಾರ ನಡೆಸಿರೋದು ನಾಚಿಕೆಗೇಡಿನ ಸಂಗತಿ. ರಾಜ್ಯ ಬಿಜೆಪಿ ಸರ್ಕಾರಕ್ಕೆ ಮಾನವೀಯತೆ ಮತ್ತು ಕರುಣೆ ಇಲ್ಲ ಎಂದು ಮಾಜಿ ಸಚಿವ ಯು ಟಿ ಖಾದರ್ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು. ಕೊರೊನಾ ಸಂದರ್ಭದಲ್ಲಿ ವೈದ್ಯಕೀಯ ಉಪಕರಣ, ಮಾಸ್ಕ್, ಪಿಪಿಇ ಕಿಟ್ ಸೇರಿ ಹಲವು ಸಾಮಗ್ರಿ ಖರೀದಿಯಲ್ಲಿ ಸಾವಿರಾರು ಕೋಟಿ ರೂಪಾಯಿ ಅವ್ಯವಹಾರ ನಡೆದಿದೆ. ಈ ಕುರಿತಂತೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಪಕ್ಷ ದಾಖಲೆ ನೀಡಿದೆ. ಪ್ರತಿಪಕ್ಷವಾಗಿ ನಾವು ಈ ಬಗ್ಗೆ ತನಿಖೆ ನಡೆಸುವಂತೆ ಆಗ್ರಹಿಸಿದ್ದೇವೆ ಎಂದರು.
ರಾಜ್ಯದಲ್ಲಿ ಕೊರೊನಾ ಪಾಸಿಟಿವ್ ಪ್ರಕರಣ ಏರಿಕೆಯಾಗುತ್ತಲೇ ಇವೆ. ಸೋಂಕಿನಿಂದ ಮೃತಪಟ್ಟವರನ್ನು ಗೌರವದಿಂದ ಅಂತಸಂಸ್ಕಾರ ಮಾಡಬೇಕು. ಆದರೆ, ಆ ಕೆಲಸವಾಗುತ್ತಿಲ್ಲ. ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಆರಂಭದಲ್ಲಿ ಸಚಿವರೇ ಸ್ವಲ್ಪ ಅವ್ಯವಹಾರವಾಗಿದೆ ಎಂದು ಹೇಳಿದ್ದಾರೆ. ಈ ಕುರಿತಂತೆ ಸರ್ಕಾರ ನ್ಯಾಯಾಧೀಶರಿಂದ ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಸಿದ್ದರಾಮಯ್ಯ ಅವರ ಸರ್ಕಾರವಿದ್ದಾಗ ಬಿಜೆಪಿಯವರು ಇಲ್ಲಸಲ್ಲದ ಆರೋಪ ಮಾಡಿದರು. ನಮ್ಮ ಸರ್ಕಾರ ಜನರ ಸಂಶಯವನ್ನು ಪರಿಹರಿಸುವ ನಿಟ್ಟಿನಲ್ಲಿ ಕೆಲಸ ಮಾಡಿದೆ. ಆದರೆ, ಬಿಜೆಪಿ ಸರ್ಕಾರ ಈಗ ಜನರಿಗೆ ಬಂದಿರುವ ಸಂಶಯವನ್ನು ಪರಿಹರಿಸುವ ನಿಟ್ಟಿನಲ್ಲಿ ಯಾಕೆ ಕ್ರಮಕೈಗೊಳ್ಳುತ್ತಿಲ್ಲ ಎಂದು ಪ್ರಶ್ನಿಸಿದರು. ವಿರೋಧ ಪಕ್ಷ ಮಾಡುವ ಆರೋಪ ಸರ್ಕಾರ ಉತ್ತಮವಾಗಿ ಕೆಲಸ ಮಾಡಲು ನೀಡುವ ವ್ಯಾಕ್ಸಿನ್ ಇದ್ದಂತೆ. ನಿಮ್ಮ ಮೇಲೆ ಆರೋಪ ಬಂದಾಗ ಅದನ್ನು ಕ್ಲಿಯರ್ ಮಾಡಬೇಕಾಗಿರುವುದು ನಿಮ್ಮ ಜವಾಬ್ದಾರಿ. ಜನಸಾಮಾನ್ಯರ ಪರವಾಗಿ ಕಾಂಗ್ರೆಸ್ ಹೋರಾಟ ಮಾಡುತ್ತದೆ ಎಂದರು.
ಕೊರೊನಾ ಚಿಕಿತ್ಸೆ ನೀಡಲು ಖಾಸಗಿ ಆಸ್ಪತ್ರೆಗೆ ಬೆಲೆ ನಿಗದಿ ಮಾಡಿರೋದನ್ನು ಪರಾಮರ್ಶಿಸಬೇಕು. ಈಗಿನ ದರ ಜಾಸ್ತಿ ಆಗುತ್ತಿದೆ. ಒಂದು ಆಸ್ಪತ್ರೆಗೆ ಬೀಗ ಹಾಕಿದರೆ ಮುಗಿಯಿತೇ? ಎಂದು ಪ್ರಶ್ನಿಸಿದ ಅವರು, ಹರ್ಷಗುಪ್ತಾರಂತಹ ಒಳ್ಳೆಯ ಅಧಿಕಾರಿಗಳನ್ನು ರಾಜ್ಯ ಸರ್ಕಾರ ಮೂಲೆಗುಂಪು ಮಾಡಿದೆ. ಅಂತಹ ಅಧಿಕಾರಿಗಳಿಗೆ ಜವಾಬ್ದಾರಿಯನ್ನು ಕೊಡಬೇಕು ಎಂದರು.