ಕೊಪ್ಪಳ : ಬಿಜೆಪಿಯವರು ಇವಿಎಂ ಹ್ಯಾಕ್ ಮಾಡುತ್ತಾರೆ. ರಾಜೀನಾಮೆ ನೀಡಿದ ಶಾಸಕರು ಇವಿಎಂನಿಂದಲೇ ಗೆದ್ದಿದ್ದಾರೆ ಎಂದು ಮಾಜಿ ಸಚಿವ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವರಾಜ ತಂಗಡಗಿ ಆರೋಪಿಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಶಿರಾದಲ್ಲಿ ಕಾಂಗ್ರೆಸ್ ಪರವಾದ ವಾತಾವರಣವಿತ್ತು. ಶಿರಾ ಕ್ಷೇತ್ರದ ಚುನಾವಣೆ ಸಂದರ್ಭದಲ್ಲಿ ನಾನು 20 ರಿಂದ 30 ಹಳ್ಳಿಗಳಿಗೆ ಹೋಗಿದ್ದೇನೆ. ಜನರು ಸ್ವಯಂ ಪ್ರೇರಿತರಾಗಿ ಜಯಚಂದ್ರ ಅವರನ್ನು ಗೆಲ್ಲಿಸುವುದಾಗಿ ಹೇಳಿದ್ದರು. ಶಿರಾದಲ್ಲಿ ಬಿಜೆಪಿಯವರು 15 ರಿಂದ 20 ಸಾವಿರ ಲೀಡ್ನಲ್ಲಿ ಗೆಲ್ಲುತ್ತೇವೆ ಎಂದು ಹೇಳಿದ್ದರು, ಅವರು ಅಲ್ಲಿ ಅಷ್ಟೇ ಮತಗಳಿಂದ ಗೆದ್ದರು. ರಾಜರಾಜೇಶ್ವರಿ ನಗರದಲ್ಲಿ 40 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತೇವೆ ಎಂದು ಹೇಳಿದ್ದರು. ಅಲ್ಲಿ 50 ಸಾವಿರ ಲೀಡ್ನಿಂದ ಗೆದಿದ್ದಾರೆ. ಇದರ ಹಿಂದೆ ಇವಿಎಂ ಮೆಶಿನ್ ಅಲ್ಲದೆ ಇನ್ನೇನಿದೆ ಎಂದು ಪ್ರಶ್ನಿಸಿದರು.
ಇವಿಎಂ ಬದಲಿಗೆ ಬ್ಯಾಲೆಟ್ ಪೇಪರ್ ಚುನಾವಣೆ ಮಾಡಲಿ. ಬ್ಯಾಲೆಟ್ ಪೇಪರ್ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ನಾವು ಶರಣಾಗತಿ ಆಗುತ್ತೇವೆ. ಮಸ್ಕಿ ಚುನಾವಣೆಯಲ್ಲಿ ನಾವು ಗೆಲ್ಲುತ್ತೇವೆ, ಜನರು ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸುತ್ತಾರೆ. ಆದರೆ ಇವಿಎಂ ಏನು ಮಾಡುತ್ತೆ ಎಂದು ನನಗೆ ಸಂಶಯವಿದೆ. ಹಾಗೊಂದು ವೇಳೆ ಕಾಂಗ್ರೆಸ್ ಗೆದ್ದರೆ, ಅದು ನಮ್ಮ ಕಣ್ಣೀರು ಒರೆಸೋಕೆ ಗೆಲ್ಲಿಸುತ್ತಾರೆ. ಮುಂದಿನ ದಿನಗಳಲ್ಲಿ ಇವಿಎಂ ಕುರಿತು ರಾಜ್ಯ, ದೇಶಾದ್ಯಂತ ಹೋರಾಟ ಮಾಡುತ್ತೇವೆ. ಜನರು ದಂಗೆ ಎದ್ದು ಬಿಜೆಪಿಯನ್ನು ಓಡಿಸುತ್ತಾರೆ ತಂಗಡಗಿ ಹೇಳಿದರು.