ಗಂಗಾವತಿ(ಕೊಪ್ಪಳ): ಶಿವಮೊಗ್ಗದಲ್ಲಿ ನಡೆದ ಯುವಕನೊಬ್ಬನ ಕೊಲೆ ಪ್ರಕರಣದ ಬಗ್ಗೆ ಇನ್ನೂ ಪೊಲೀಸ್ ತನಿಖೆ ನಡೆಯುತ್ತಿದೆ. ಆದರೆ, ಅದನ್ನು ಮುಸಲ್ಮಾನರು ಮಾಡಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಅವರು ಹೇಳಿಕೆ ನೀಡಿದ್ದಾರೆ. ಅದು ಹೇಗೆ ಈಶ್ವರಪ್ಪ ಇಷ್ಟು ಬೇಗ ನಿರ್ಣಯ ಕೈಗೊಂಡರು. ಅವರಿಗೆ ಹೇಗೆ ಗೊತ್ತಾಯಿತು. ಅವರಿಗೇನಾದರೂ ಕನಸು ಬಿದ್ದಿತ್ತೆ? ಎಂದು ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಪ್ರಶ್ನಿಸಿದ್ದಾರೆ.
ನಗರದಲ್ಲಿ ಕಾಂಗ್ರೆಸ್ ಪಕ್ಷದಿಂದ ಹಮ್ಮಿಕೊಂಡಿದ್ದ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ, ದೇಶದಲ್ಲಿ ಏನಾದರೂ ಕೋಮು ಪ್ರಚೋದನೆ ಮಾಡಿ ಅದರ ಲಾಭ ಪಡೆದುಕೊಳ್ಳುವಲ್ಲಿ ಬಿಜೆಪಿ ಸದಾ ಮುಂಚೂಣಿಯಲ್ಲಿರುತ್ತದೆ. ಒಬ್ಬ ಸಚಿವ ಸಾರ್ವಜನಿಕವಾಗಿ ಹೇಗೆ ನಡೆದುಕೊಳ್ಳಬೇಕು ಎಂಬ ಪ್ರಾಥಮಿಕ ಜ್ಞಾನ ಅವರಿಗಿಲ್ಲ. ಅವರಿಗೆ ಮಾತನಾಡಲು ಯಾವುದೇ ಇತಿಮಿತಿ ಇಲ್ಲದಂತೆ ವರ್ತಿಸುತ್ತಾರೆ ಎಂದು ಕಿಡಿಕಾರಿದರು.
ಒಬ್ಬ ಸಚಿವನಾಗಿ, ಸರ್ಕಾರದ ಪ್ರತಿನಿಧಿಯಾಗಿ ಸಾರ್ವಜನಿಕರ ಹಿತ ಕಾಯಬೇಕಿರುವ ಸಚಿವ ಈಶ್ವರಪ್ಪ, ತಮಗಿಷ್ಟ ಬಂದಂತೆ ಮಾತನಾಡುತ್ತಾರೆ. ಸರ್ಕಾರದ ಘನತೆ ಗೌರವಗಳನ್ನು ಮಣ್ಣು ಪಾಲು ಮಾಡುತ್ತಿದ್ದಾರೆ. ಈ ಕೂಡಲೇ ಅವರನ್ನು ಸಚಿವ ಸಂಪುಟದಿಂದ ಕೈಬಿಡಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಮಾಜಿ ಸಂಸದ ಶಿವರಾಮಗೌಡ ಮಾತನಾಡಿದರು. ಬಳಿಕ ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಓದಿ: ಕೆಪಿಎಎಸ್ಸಿ ಆಯ್ಕೆ ಮತ್ತು ನೇಮಕಾತಿ ಸಿಂಧುಗೊಳಿಸುವ ವಿಧೇಯಕಕ್ಕೆ ವಿಧಾನಸಭೆಯಲ್ಲಿ ಅಂಗೀಕಾರ