ಗಂಗಾವತಿ: ಹೋಳಿ ಹಬ್ಬದ ನಿಮಿತ್ತ ನಗರ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಬಣ್ಣದೋಕುಳಿ ಸಂಭ್ರಮ ಜೋರಾಗಿಯೇ ನಡೆಯಿತು. ಪರಸ್ಪರ ಬಣ್ಣ ಎರಚಿಕೊಳ್ಳುವ ರಂಗ ಪಂಚಮಿ ಆಚರಿಸಲಾಯಿತು. ಬುಧವಾರ ತಾಲೂಕಿನೆಲ್ಲೆಡೆ ಹೋಳಿಯ ಸಂಭ್ರಮ ಕಂಡುಬಂತು. ಮುಖ್ಯವಾಗಿ ಮಹಿಳೆಯರು, ಮಕ್ಕಳು ಬಣ್ಣದೋಕುಳಿಯಲ್ಲಿ ಮಿಂದೆದ್ದರು.
ವಿದೇಶಿಗರಿಂದ ಸಂಭ್ರಮದ ಬಣ್ಣದೋಕುಳಿ: ಹಂಪಿ- ಆನೆಗೊಂದಿ ಪ್ರವಾಸಕ್ಕೆಂದು ಬಂದಿರುವ ನೂರಾರು ವಿದೇಶಿಗರು ಆನೆಗೊಂದಿ ಸುತ್ತಲೂ ಇರುವ ರೆಸಾರ್ಟ್ಗಳಲ್ಲಿ ತಂಗಿದ್ದರು. ವಿದೇಶಿಗರು ಕೂಡಾ ಸ್ಥಳೀಯರ ಯುವಕರು, ಮಕ್ಕಳೊಂದಿಗೆ ಓಕುಳಿ ಆಡಿ ಬಣ್ಣದಲ್ಲಿ ಮಿಂದೆದ್ದು ಸಂಭ್ರಮಿಸಿದರು. ಮುಖ್ಯವಾಗಿ ತಾಲೂಕಿನ ಪ್ರಮುಖ ಧಾರ್ಮಿಕ ತಾಣವಾಗಿರುವ ಅಂಜನಾದ್ರಿ ಮತ್ತು ಪ್ರವಾಸಿ ತಾಣವಾಗಿರುವ ವಿರುಪಾಪುರ ಗಡ್ಡೆಯ ಸುತ್ತಲೂ ನೆಲೆಸಿರುವ ವಿದೇಶಿಗರು ತಮ್ಮ ವಸತಿ ಪ್ರದೇಶದಲ್ಲಿ ಸಮೀಪದಲ್ಲೇ ಬಣ್ಣದೊಕುಳಿ ಆಡಿ ಖುಷಿಪಟ್ಟರು.
![Holi festival](https://etvbharatimages.akamaized.net/etvbharat/prod-images/kn-gvt-01-08-holi-celbertion-by-forgners-at-anjanadri-vis-kac10005_08032023161748_0803f_1678272468_693.jpg)
ಕೆಲವು ರೆಸಾರ್ಟ್ಗಳಲ್ಲಿ ವಿದೇಶಗರ ಓಕುಳಿಯಾಟಕ್ಕೆಂದೇ ಸೌಂಡ್ ಸಿಸ್ಟಮ್ ಏರ್ಪಾಟು ಮಾಡಲಾಗಿತ್ತು. ಇನ್ನಷ್ಟು ರೆಸಾರ್ಟ್ಗಳಲ್ಲಿ ಮೆರವಣಿಗೆ ಕೂಡಾ ಹಮ್ಮಿಕೊಳ್ಳಲಾಗಿತ್ತು. ಹತ್ತಾರು ದೇಶಗಳಿಂದ ಪ್ರವಾಸಕ್ಕೆ ಎಂದು ಬಂದಿದ್ದ ವಿದೇಶಿಗರು, ಭಾರತದ ಸಾಂಸ್ಕೃತಿಕ ಪರಂಪರೆ, ಆಚರಣೆಗೆ ಫಿದಾ ಆಗಿದ್ದು ಕಂಡುಬಂತು.
ಹೋಳಿ ಹಬ್ಬದ ಹಿನ್ನೆಲೆ ಅದ್ಧೂರಿ ಮೆರವಣಿಗೆ: ತಾಲೂಕಿನ ಸಣಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ವಿರುಪಾಪುರ ಗಡ್ಡೆಯ ಸಮೀಪಿ ಇರುವ ಪೌರಾಣಿಕವಾದ ರಾಮಾಯಣದ ಕಾಲಘಟ್ಟದ್ದು ಎಂದು ಗುರುತಿಸಲಾಗುವ ಕಲ್ಲಿನ ಸೇತುವೆಯಿಂದ ಆರಂಭವಾದ ಮೆರವಣಿಗೆ ತುಂಗಭದ್ರಾ ನದಿಯವರೆಗೂ ನಡೆಯಿತು.
![Holi festival](https://etvbharatimages.akamaized.net/etvbharat/prod-images/kn-gvt-01-08-holi-celbertion-by-forgners-at-anjanadri-vis-kac10005_08032023161748_0803f_1678272468_692.jpg)
ಸುಮಾರು ಅರ್ಧ ಕಿಲೋ ಮೀಟರ್ ಉದ್ದದ ಮೆರವಣಿಗೆಯಲ್ಲಿ ನೂರಾರು ವಿದೇಶಿಗರು ಪಾಲ್ಗೊಂಡು ಸಂಭ್ರಮಿಸಿದರು. ಯಾವುದೇ ಅಹಿತರ ಘಟನೆ ನಡೆಯದಂತೆ ಗ್ರಾಮೀಣ ಪೊಲೀಸ್ ಠಾಣೆಯಿಂದ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಬೆಟ್ಟದ ಮೇಲೆ ಇರುವ ಪವನಸುತನ ಅಂಜನಾದ್ರಿ ದೇಗುಲದ ಆವರಣದಲ್ಲಿಯೂ ಕೆಲ ವಿದೇಶಿಗರು ಬಣ್ಣದ ಆಟವಾಡಿ ಸಂಭ್ರಮಿಸಿದರು. ದೇವಸ್ಥಾನಕ್ಕೆಂದು ಬಂದಿದ್ದ ಭಕ್ತರು, ಮಕ್ಕಳಿಗೆ ವಿದೇಶಿಗರು ಬಣ್ಣ ಎರಚಿ ಸಂಭ್ರಮಿಸಿದರು.
ಕಾಮದಹನ, ಹೋಳಿ ಸಂಭ್ರಮ: ಹೋಳಿಹಬ್ಬದ ಅಂಗವಾಗಿ ಮಂಗಳವಾರ ರಾತ್ರಿ ಇಲ್ಲಿನ ಮಹಾತ್ಮಗಾಂಧಿ ವೃತ್ತದಲ್ಲಿ ಕಾಮದಹನ ನೆರವರಿಸಿದ ಯುವಕರು ನಗರದಲ್ಲಿ ಬುಧವಾರ ಬಣ್ಣದಾಟವಾಡಿ ಸಂಭ್ರಮಿಸಿದರು. ಮಹಾತ್ಮಗಾಂಧಿ ವೃತ್ತದಲ್ಲಿ ದೊಡ್ಡ ಪ್ರಮಾಣದಲ್ಲಿ ಯುವಕರು ಸೇರಿದ್ದರು.
ಗಡಿಗೆ ಒಡೆಯುವ ಸ್ಪರ್ಧೆ: ವೃತ್ತದಲ್ಲಿ ದೊಡ್ಡ ಕಮಾನು ನಿರ್ಮಾಣ ಮಾಡಿ ಗಡಿಗೆ ಒಡೆಯುವ ಸ್ಪರ್ಧೆ ಏರ್ಪಡಿಸಲಾಗಿತ್ತು. ಅಬ್ಬರದ ಡಿಜೆ ಸಂಗೀತಕ್ಕೆ ತಕ್ಕಂತೆ ಯುವಕರು ನೃತ್ಯ ಮಾಡಿ ಸಂಭ್ರಮಿಸಿದರು. ಶಾಸಕ ಪರಣ್ಣ ಮುನವಳ್ಳಿ ಸೇರಿದಂತೆ ಹಾಲಿ-ಮಾಜಿ ಚುನಾಯಿತ ಪ್ರತಿನಿಧಿಗಳು ಯುವಕರಿಗೆ ಸಾಥ್ ನೀಡಿದರು. ಇಲ್ಲಿನ ಜಯನಗರದಲ್ಲಿರುವ ಲಿಂಗಾಯ ಸಮುದಾಯದ ವಿದ್ಯಾರ್ಥಿನಿಯರ ವಸತಿ ಮತ್ತು ಉಚಿತ ಪ್ರಸಾದದ ನಿಲಯದಲ್ಲಿ ಪದವಿ ವಿದ್ಯಾರ್ಥಿನಿಯರು ಹೋಳಿ ಹಬ್ಬದ ಅಂಗವಾಗಿ ಬಣ್ಣ ಎರಚಿಕೊಂಡು ಸಂಭ್ರಮಿಸಿದರು. ನೂರಾರು ವಿದ್ಯಾರ್ಥಿನಿಯರು ಬಣ್ಣದೋಕುಳಿಯಲ್ಲಿ ಭಾಗಿಯಾಗಿದ್ದರು.
ಜಯನಗರ, ಸಿದ್ದೀಕೇರಿ, ಜೈನ್ ಕಾಲೋನಿ ಸೇರಿದಂತೆ ನಾನಾ ಏರಿಯಾದಲ್ಲಿ ಮಹಿಳೆಯರು, ಗೃಹಿಣಿಯರು ಹೋಳಿ ಹಬ್ಬದ ಆಟವಾಡಿ ಸಂಭ್ರಮಿಸಿದರು. ನಗರದ ಕೆಲ ಖಾಸಗಿ ಹೊಟೇಲ್ನಲ್ಲಿ ಹೋಳಿ ಆಚರಣೆಗೆ ವ್ಯವಸ್ಥೆ ಮಾಡಲಾಗಿತ್ತು.
ಇದನ್ನೂ ಓದಿ: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ 2023: ಮಹಿಳೆಯರಿಗೆ ಶಿಕ್ಷಣವೇ ಆಸ್ತಿ ಮತ್ತು ಶಕ್ತಿ: ಅನ್ಬುಕುಮಾರ್