ಗಂಗಾವತಿ: ಉತ್ಕೃಷ್ಟ ಗುಣಮಟ್ಟದ ತಳಿಯಾದ ಸೋನಾ ಮಸೂರಿ ಅಕ್ಕಿ ಮತ್ತು ಭತ್ತದ ತವರಲ್ಲಿ ಇದೀಗ ವಿದೇಶಿ ತಳಿಯ ನೂರಾರು ಸಸ್ಯಗಳು ಇಲ್ಲಿ ಅರಳಿ ನಳನಳಿಸಲು ದೂರದ ರಾಜಮಂಡ್ರಿಯಿಂದ ನಗರಕ್ಕೆ ಬಂದಿವೆ.
ಮನೆಯ ಒಳಾಂಗಣ, ಹೊರಂಗಣದದಲ್ಲಿ ಬೆಳೆಸಬಹುದಾದ ಅಲಂಕಾರಿಕ ಸಸ್ಯಗಳು ಇದ್ದರೆ ಆ ಮನೆಯ ಸೊಗಸೇ ಬೇರೆ. ಪಾರ್ಕ್, ಕೈತೋಟ, ಮನೆಯ ಅಲ್ಪಸ್ವಲ್ಪ ಜಾಗದಲ್ಲಿ ನೆಟ್ಟು ಬೆಳೆಸಬಹುದಾದ ನೂರಾರು ತರಹೇವಾರಿ ಗಿಡಗಳು ನಗರಕ್ಕೆ ಬಂದಿವೆ. ಆಂಧ್ರ ಪ್ರದೇಶದ ರಾಜಮಂಡ್ರಿಯ ಖಾಸಗಿ ನರ್ಸರಿ ಸಂಸ್ಥೆಯೊಂದು ಜುಲಾಯಿನಗರದ (ಇಂದಿರಾ ವೃತ್ತ) ರಿಲಯನ್ಸ್ ಪೆಟ್ರೋಲ್ ಬಂಕ್ ಮುಂದೆ ಸಸ್ಯಗಳ ಪ್ರದರ್ಶನ ಮತ್ತು ಮಾರಾಟ ಹಮ್ಮಿಕೊಂಡಿದ್ದು, ಜನರನ್ನು ಕೈಬೀಸಿ ಕರೆಯುತ್ತಿವೆ.
ಏನೆಲ್ಲಾ ಇವೆ:
ವಿದೇಶಿ ತಳಿಗಳಾದ ಬ್ಲಾಕ್ ಷಕರ್ಸ್, ಫಾಂಟಾ, ಸ್ಟಾರ್ಲೈಟ್, ಆಕರ್ಫಾಮ್, ರಾಯಲ್ ಫಾಮ್, ಸಪ್ಲೈಯರ್, ರೈಸೋಬೆರ್ರಿ, ಡ್ರೆಸೇನಿಯಾ, ರೇಲಿಯಾಗ್ರೀನ್, ರಿಬ್ಬನ್ ಕ್ರಾಸ್, ನಿಕೋಟಿಯಂತh ಹತ್ತಾರು ವಿದೇಶಿ ಹೂವಿನ ತಳಿಗಳಿವೆ. ಜೊತೆಗೆ ದೇಶಿಯ ಸಸ್ಯಗಳಾದ ನಾನಾ ಬಣ್ಣದ ಗುಲಾಬಿ, ಪಾರಿಜಾತ, ಕಣಗಲಿ, ಹತ್ತಾರು ಬಣ್ಣದ ಸೇವಂತಿ, ತುರಂತ್, ನಂದಿವರ್ಧನ, ಮಂದಾರ, ಕನಕಾಂಬರಿ ಹೀಗೆ ನೂರಾರು ತಳಿಯ ಸಸ್ಯಗಳು ಲಭ್ಯ ಇವೆ.
ಸದ್ಯಕ್ಕೆ ಮಾರುಕಟ್ಟೆಗೆ ಸ್ಯಾಂಪಲ್ ತರಲಾಗಿದೆ. ಇನ್ನೊಂದು ವಾರದಲ್ಲಿ ಮತ್ತಷ್ಟು ವಿದೇಶಿ ತಳಿಯ ಸಸ್ಯಗಳು ಆಮದಾಗುತ್ತವೆ ಎಂದು ಮಾರಾಟಗಾರ ರಾಮಬಾಬು ಹೇಳಿದರು.
ಸಸ್ಯ ಬೆಳೆಸುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಖಾಸಗಿ ಸಂಸ್ಥೆಗಳ ಸಸ್ಯಗಳು ದುಬಾರಿಯಾಗಿವೆ. ತೋಟಗಾರಿಕಾ ಇಲಾಖೆಯಿಂದಲೇ ಪ್ರದರ್ಶನ, ಮಾರಾಟ ಹಮ್ಮಿಕೊಳ್ಳಬೇಕು. ಇದರಿಂದ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ ಎಂದು ಪರಿಸರ ಪ್ರಿಯ ಕೊಲ್ಲಿ ಗಂಗಾಧರ ಹೇಳಿದ್ದಾರೆ.