ಕುಷ್ಟಗಿ(ಕೊಪ್ಪಳ): ಕುಷ್ಟಗಿ ತಾಲೂಕಿನ ಸಾಮಾಜಿಕ ಕಲ್ಯಾಣ ಇಲಾಖೆಯ ನಿಡಶೇಸಿ ಮೊರಾರ್ಜಿ ವಸತಿ ನಿಲಯದಲ್ಲಿ ಕಳಪೆ ಉಪಹಾರ ಸೇವಿಸಿ 30ಕ್ಕೂ ಅಧಿಕ ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದಾರೆ.
ನಿಡಶೇಸಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 250 ವಿದ್ಯಾರ್ಥಿಗಳಿದ್ದಾರೆ. ಕಳೆದ ರಾತ್ರಿ ಅನ್ನ-ಸಾರು ಸೇವಿಸಿದ್ದರು. ಬೆಳಗ್ಗೆ ಕೆಲ ವಿದ್ಯಾರ್ಥಿಗಳು ಇಡ್ಲಿ ಉಪಾಹಾರ ಸೇವಿಸಿದ್ದರು. ಕೆಲ ಹೊತ್ತಿನಲ್ಲೇ ಆ ವಿದ್ಯಾರ್ಥಿಗಳಿಗೆ ತಲೆಸುತ್ತು ಶುರುವಾಗಿದೆ.
ಕೂಡಲೇ ಇಡ್ಲಿ ಉಪಾಹಾರ ಬದಲಿಸಿ ಪಲಾವ್ ತಯಾರಿಸಲು ಮುಂದಾದಾಗ 2 ತಾಸು ಹಿಡಿಯಿತು. ಬೆಳಗಿನ ಉಪಹಾರ ವಿಳಂಬವಾಗಿದ್ದರಿಂದ ಉಳಿದ ವಿದ್ಯಾರ್ಥಿಗಳು ಒಬ್ಬರಿಂದ ಒಬ್ಬರಿಗೆ ಸಮೂಹ ಸನ್ನಿಗೆ ಒಳಗಾಗಿ ಗಾಬರಿಗೊಂಡಿದ್ದಾರೆ.
ಆತಂಕಗೊಂಡಿದ್ದ ವಿದ್ಯಾರ್ಥಿಗಳು ವಿಚಾರವನ್ನು ಅಲ್ಲಿನ ಸಿಬ್ಬಂದಿಯ ಗಮನಕ್ಕೆ ತಂದರು. ಕೂಡಲೇ ಆರೋಗ್ಯ ಇಲಾಖೆ ಗಮನಕ್ಕೆ ತಂದು ಅಸ್ವಸ್ಥಗೊಂಡ 30 ವಿದ್ಯಾರ್ಥಿಗಳನ್ನು ಮೊದಲ ಹಂತವಾಗಿ ಕುಷ್ಟಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದರು. ನಂತರ ಎಲ್ಲ ವಿದ್ಯಾರ್ಥಿಗಳನ್ನು ಸದರಿ ಆಸ್ಪತ್ರೆಗೆ ದಾಖಲಿಸಿ ಸಕಾಲಕ್ಕೆ ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳಲಾಯಿತು.
ಸದರಿ ವಿದ್ಯಾರ್ಥಿಗಳಿಗೆ ಸಕಾಲಕ್ಕೆ ಚಿಕಿತ್ಸೆ ಸಿಕ್ಕಿದ್ದರಿಂದ ಅಪಾಯದಿಂದ ಪಾರಾಗಿದ್ದಾರೆ. ಈ ವಸತಿ ನಿಲಯದಲ್ಲಿ ವಾರ್ಡನ್ ಇಲ್ಲದಿರುವ ಹಿನ್ನೆಲೆ ಪ್ರಾಚಾರ್ಯ ವಿಜಯಕುಮಾರ್ ದೊಡ್ಡಮನಿ ಅವರೇ ಜವಾಬ್ದಾರಿ ವಹಿಸಿಕೊಂಡಿದ್ದಾರೆ.
ಆದ್ರೆ, ಇವರಿಗೆ ಅಡುಗೆ ಸಿಬ್ಬಂದಿ ಅಸಹಕಾರ ತೋರದಿರುವುದೇ ಈ ದುರ್ಘಟನೆಗೆ ಕಾರಣ ಎನ್ನಲಾಗುತ್ತಿದೆ. ಈ ಹಿನ್ನೆಲೆ ತಾಲೂಕು ವೈದ್ಯಾಧಿಕಾರಿ ಡಾ. ಅನಂದ ಗೋಟೂರು, ತಹಶೀಲ್ದಾರ್ ಎಂ. ಸಿದ್ದೇಶ ಭೇಟಿ ನೀಡಿ ವಿದ್ಯಾರ್ಥಿಗಳು ಸೇವಿಸಿದ್ದ ಆಹಾರದ ಮಾದರಿ ಸಂಗ್ರಹಿಸಿದ್ದಾರೆ.
ಶಾಸಕ, ಮಾಜಿ ಶಾಸಕರ ಭೇಟಿ : ವಿಧಾನ ಪರಿಷತ್ ಚುನಾವಣೆ ಪ್ರಚಾರ ಸಭೆಯಲ್ಲಿ ಭಾಗವಹಿಸಿದ್ದ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಅವರು ಆಸ್ಪತ್ರೆಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದರು.
ಆತಂಕ ಪಡುವ ಅಗತ್ಯವಿಲ್ಲ. ಈ ಪ್ರಕರಣದಲ್ಲಿ ನಿಷ್ಕಾಳಜಿ ತೋರಿದ ಸಿಬ್ಬಂದಿ ಮೇಲೆ ಕ್ರಮಕೈಗೊಳ್ಳಲು ಜಿಲ್ಲಾಧಿಕಾರಿಗೆ ಸೂಚನೆ ನೀಡುವುದಾಗಿ ತಿಳಿಸಿದರು. ಇದೇ ಸಂದರ್ಭದಲ್ಲಿ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ, ಜಿಪಂ ಮಾಜಿ ಸದಸ್ಯ ಕೆ.ಮಹೇಶ್, ಪುರಸಭೆ ಅಧ್ಯಕ್ಷ ಗಂಗಾಧರ ಸ್ವಾಮಿ ಹಿರೇಮಠ ಮತ್ತಿತರರು ಭೇಟಿ ನೀಡಿ ವಿದ್ಯಾರ್ಥಿಗಳ ಯೋಗಕ್ಷೇಮ ವಿಚಾರಿಸಿದರು.
ಇದನ್ನೂ ಓದಿ: ಧಾರವಾಡದಲ್ಲಿ ಕೋವಿಡ್ ಅಬ್ಬರ.. ಎಸ್ಡಿಎಮ್ ಕಾಲೇಜಿನ ಓಪಿಡಿ, ಹೊಸ ರೋಗಿಗಳ ಎಂಟ್ರಿಗೆ ನಿರ್ಬಂಧ
ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಚಾರ್ಯ ವಿಜಯಕುಮಾರ ದೊಡ್ಡಮನಿ ಪ್ರತಿಕ್ರಿಯಿಸಿ, ಬೆಳಗಿನ ಉಪಹಾರ ವಿಳಂಬವಾಗಿದ್ದರಿಂದ ಈ ರೀತಿಯಾಗಿದೆ ಎಂದು ಸ್ಪಷ್ಟಪಡಿಸಿದರು.