ಕುಷ್ಟಗಿ (ಕೊಪ್ಪಳ): ಕುಷ್ಟಗಿ-ಇಳಕಲ್ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಕೆ.ಬೋದೂರು ಬಳಿ ಟೋಲ್ ಪ್ಲಾಜಾದಲ್ಲಿ ಶಾರ್ಟ್ ಸರ್ಕಿಟ್ನಿಂದಾಗಿ ಬೆಂಕಿ ಹೊತ್ತಿಕೊಂಡ ಘಟನೆ ನಡೆದಿದೆ.
ಮಧ್ಯಾಹ್ನ ಟೋಲ್ ಪ್ಲಾಜಾ ಕ್ಯಾಬಿನ್ನಲ್ಲಿ ವಿದ್ಯುತ್ ಶಾರ್ಟ್ ಸರ್ಕಿಟ್ ಉಂಟಾಗಿ ಬೆಂಕಿ ಕಾಣಿಸಿಕೊಂಡು ಧಗ ಧಗನೆ ದಟ್ಟ ಹೊಗೆಯಿಂದ ಹೊತ್ತಿ ಉರಿದಿದೆ. ಇದೇ ವೇಳೆ ಟೋಲ್ ಪಾಸಾಗುತ್ತಿದ್ದ ಸಿಮೆಂಟ್ ತುಂಬಿದ ಲಾರಿಗೂ ಬೆಂಕಿ ವ್ಯಾಪಿಸಿದೆ. ಆ ವೇಳೆ ಸಿಬ್ಬಂದಿ ಬೆಂಕಿ ನಂದಿಸಲು ವಿಫಲ ಯತ್ನ ನಡೆಸಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ವಾಹನ ಬೆಂಕಿ ನಂದಿಸಿತು. ಈ ಕುರಿತು ಅಗ್ನಿಶಾಮಕ ಠಾಣಾಧಿಕಾರಿ ಎನ್.ರಾಜು ಪ್ರತಿಕ್ರಿಯಿಸಿ ವಿದ್ಯುತ್ ಶಾರ್ಟ್ ಸರ್ಕಿಟ್ನಿಂದ ಬೆಂಕಿ ಹೊತ್ತಿಕೊಂಡಿದ್ದು ಕ್ಯಾಬಿನ್ ಒಳಭಾಗದಲ್ಲಿ ದಟ್ಟ ಹೊಗೆ ಆವರಿಸಿತ್ತು. ಸದ್ಯ ಬೆಂಕಿ ನಿಯಂತ್ರಣಕ್ಕೆ ತರಲಾಗಿದೆ. ಟೋಲ್ ಕ್ಯಾಬಿನ್ , ಲಾರಿಯಲ್ಲಿದ್ದ ದಾಖಲೆ ಸುಟ್ಟಿದ್ದು, ಲಾರಿಯೂ ಭಾಗಶಃ ಸುಟ್ಟಿದೆ. ಯಾವುದೇ ಜೀವಹಾನಿಯಾಗಿಲ್ಲ ಎಂದು ತಿಳಿಸಿದರು. ಟೋಲ್ ಪ್ಲಾಜಾದಲ್ಲಿ ಬೆಂಕಿ ಹೊತ್ತಿಕೊಂಡಿದ್ದರಿಂದ ಕೆಲ ಹೊತ್ತು ಟೋಲ್ ಮೂಲಕ ಸಂಚಾರ ನಿರ್ಬಂಧಿಸಲಾಗಿತ್ತು.