ಕೊಪ್ಪಳ: ತುಂಗಭದ್ರಾ ನದಿ ಪ್ರವಾಹ ಬಗ್ಗೆ ಎಚ್ಚರಿಕೆ ನೀಡಿದ್ದರೂ ಆ ಆದೇಶವನ್ನು ಧಿಕ್ಕರಿಸಿ ಪ್ರವಾಸಿಗರಿಗೆ ತಪ್ಪು ಮಾಹಿತಿ ನೀಡಿ ಪ್ರವಾಹಭೀತಿಯಲ್ಲಿ ಸಿಲುಕುವಂತೆ ಮಾಡಿದ ವಿರುಪಾಪುರಗಡ್ಡೆಯಲ್ಲಿರುವ ರೆಸಾರ್ಟ್ ಮಾಲೀಕರ ವಿರುದ್ಧ ಎಫ್ಐಆರ್ ದಾಖಲಿಸಲು ಗಂಗಾವತಿ ತಹಸಿಲ್ದಾರ್ಗೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಹೇಳಿದ್ದಾರೆ.
ತಾಲೂಕಿನ ಮುನಿರಾಬಾದ್ನಲ್ಲಿ ಮಾತನಾಡಿದ ಅವರು, ಗಂಗಾವತಿ ತಾಲೂಕಿನ ವಿರುಪಾಪುರಗಡ್ಡೆಯಲ್ಲಿ ಸುಮಾರು 590 ಜನರು ತುಂಗಭದ್ರಾ ನದಿ ಪ್ರವಾಹ ಭೀತಿ ಎದುರಿಸಿದ್ದರು. ಸತತ ಎರಡ್ಮೂರು ದಿನ ಕಾರ್ಯಚರಣೆ ನಡೆಸಿ ಎಲ್ಲರನ್ನೂ ರಕ್ಷಿಸಲಾಗಿದೆ. ನದಿಯಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗುತ್ತದೆ ಎಂದು ಈ ಮೊದಲೇ ಸೂಚನೆ ಮತ್ತು ಆದೇಶ ಹೊರಡಿಸಿದ್ದರೂ ಸಹ ಆ ಆದೇಶವನ್ನು ಅಲ್ಲಿನ ರೆಸಾರ್ಟ್ ಮಾಲೀಕರು ಉಲ್ಲಂಘಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರೆಸಾರ್ಟ್ ಮಾಲೀಕರ ವಿರುದ್ಧ ಎಫ್ಐಆರ್ ದಾಖಲಿಸಲು ಗಂಗಾವತಿ ತಹಶೀಲ್ದಾರ್ ಗೆ ಸೂಚನೆ ನೀಡಲಾಗಿದೆ. ಹಾಗೂ ರೆಸಾರ್ಟ್ ಮಾಲೀಕರ ವಿರುದ್ಧ ದೂರು ದಾಖಲಿಸಲಾಗುತ್ತದೆ. ಜತೆಗೆ ರಕ್ಷಣಾ ಕಾರ್ಯಾಚರಣೆಯ ಖರ್ಚುವೆಚ್ಚಗಳನ್ನು ಅವರಿಂದಲೇ ವಸೂಲಿ ಮಾಡುವಂತಹ ಕ್ರಮಕ್ಕೂ ಸಹ ಮುಂದಾಗುತ್ತೇವೆ ಎಂದು ಹೇಳಿದರು.
ಇನ್ನು ತುಂಗಭದ್ರಾ ಎಡದಂಡೆ ಮೇಲ್ಮಟ್ಟದ ನಾಲೆ ದುರಸ್ತಿ ಕಾರ್ಯ ನಡೆದಿದೆ. ಇಂದು ರಿಪೇರಿಯಾಗುತ್ತದೆ ಎಂದು ತಂತ್ರಜ್ಞರು ಹೇಳಿದ್ದಾರೆ. ನಾಲೆಯ ನೀರು ನುಗ್ಗಿ ಅಪಾರ ಬೆಳೆಹಾನಿಯಾಗಿದೆ. ಮುನಿರಾಬಾದ್ನಲ್ಲಿ ನೂರಾರು ಮನೆಗಳಿಗೆ ನೀರು ನುಗ್ಗಿದೆ. ಈ ಪ್ರಕರಣ ಬೇರೆಯಾಗಿರುವುದರಿಂದ ಇವರಿಗೆ ಪರಿಹಾರ ನೀಡುವ ಕುರಿತಂತೆ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಚರ್ಚಿಸಲಾಗಿದೆ. ಜೊತೆಗೆ ನಾಲೆಯ ಗೇಟ್ ಕಿತ್ತು ಹೋಗಿರುವುದಕ್ಕೆ ಸರಿಯಾಗಿ ನಿರ್ವಹಣೆ ಮಾಡದಿರುವುದು ಕಾರಣ ಎಂಬ ಆರೋಪವಿದೆ. ಈ ಹಿನ್ನೆಲೆಯಲ್ಲಿ ಆಗಿರುವ ಲೋಪದ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಅವರು ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.