ಕೊಪ್ಪಳ: ಮುನಿರಾಬಾದ್ನ ತುಂಗಭದ್ರಾ ಜಲಾಶಯಕ್ಕೆ ಸಮಾನಾಂತರವಾಗಿ ನವಲಿ ಬಳಿ ಜಲಾಶಯ ನಿರ್ಮಿಸುವ ರಾಜ್ಯ ಸರ್ಕಾರದ ಯೋಜನೆಗೆ ಸ್ಥಳೀಯ ರೈತರು ಹಾಗೂ ಕಾಂಗ್ರೆಸ್ ಮುಖಂಡರು ವಿರೋಧ ವ್ಯಕ್ತಪಡಿಸಿದ್ದಾರೆ.
ತುಂಗಭದ್ರಾ ಜಲಾಶಯದಲ್ಲಿ ಸುಮಾರು 33 ಟಿಎಂಸಿಯಷ್ಟು ಹೂಳು ತುಂಬಿರುವುದರಿಂದ ನಿಗದಿತ ಪ್ರದೇಶಕ್ಕೆ ನೀರು ಒದಗಿಲಸು ಸಾಧ್ಯವಾಗುತ್ತಿಲ್ಲ. ಈ ಕಾರಣಕ್ಕೆ ನವಲಿ ಬಳಿ ಸಮಾನಾಂತರ ಜಲಾಶಯ ನಿರ್ಮಿಸಲು ಸರ್ಕಾರ ಮುಂದಾಗಿದೆ. ಅದಕ್ಕಾಗಿ ಈ ಬಾರಿಯ ಬಜೆಟ್ನಲ್ಲಿ ಒಂದು ಸಾವಿರ ಕೋಟಿ ರೂ. ಅನುದಾನ ನೀಡುವುದಾಗಿ ಘೋಷಣೆಯನ್ನೂ ಮಾಡಿದೆ. ಈಗ ಇದರ ಪರ ವಿರೋಧ ಚರ್ಚೆ ಪ್ರಾರಂಭವಾಗಿದೆ.
ಕನಕಗಿರಿ ತಾಲೂಕಿನ ನವಲಿ ಬಳಿ ಸಮಾನಾಂತರ ಜಲಾಶಯ ನಿರ್ಮಾಣ ಮಾಡುವುದು ಮುಂದಿನ ವಿಧಾನಸಭೆ ಚುನಾವಣೆಯ ಅಜೆಂಡಾವಾಗಲಿದೆ. ಕನಕಗಿರಿ ತಾಲೂಕಿನಲ್ಲಿ ನಿರ್ಮಾಣವಾಗುವ ನವಲಿ ಜಲಾಶಯದಿಂದ ಈ ತಾಲೂಕಿನ ಜನರಿಗೆ ಲಾಭವಿಲ್ಲ ಎಂಬ ಕಾರಣಕ್ಕೆ ಕನಕಗಿರಿ ತಾಲೂಕಿನವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
165 ಟಿಎಂಸಿ ನೀರು ಈಗ ವ್ಯರ್ಥ: ಕರ್ನಾಟಕದಲ್ಲಿ ಹುಟ್ಟಿ ಆಂಧ್ರದಲ್ಲಿ ಕೃಷ್ಣಾ ನದಿಗೆ ಸೇರಿಕೊಳ್ಳುವ ತುಂಗಭದ್ರಾ ನದಿಗೆ ಕೊಪ್ಪಳ ಜಿಲ್ಲೆಯ ಮುನಿರಾಬಾದ್ ಬಳಿ 70 ವರ್ಷಗಳ ಹಿಂದೆ ತುಂಗಭದ್ರಾ ಜಲಾಶಯ ನಿರ್ಮಿಸಲಾಗಿದೆ. ಒಟ್ಟು 133 ಟಿಎಂಸಿ ಸಾಮರ್ಥ್ಯದ ತುಂಗಭದ್ರಾ ಜಲಾಶಯದಲ್ಲಿ ಈಗ ಸುಮಾರು 33 ಟಿಎಂಸಿಗೂ ಅಧಿಕ ಹೂಳು ತುಂಬಿದೆ. ಈ ಬಾರಿ ಜಲಾಶಯದಿಂದ ಸುಮಾರು 165 ಟಿಎಂಸಿ ನೀರು ನದಿ ಮೂಲಕ ಆಂಧ್ರಪ್ರದೇಶಕ್ಕೆ ಸೇರಿದೆ. ಕರ್ನಾಟಕವು ತನ್ನ ಪಾಲಿನ ನೀರಿನ ಬಳಕೆ ಮಾಡಿಕೊಳ್ಳಲು ಹೂಳು ಅಡ್ಡಿಯಾಗಿದೆ. ಜಲಾಶಯದಲ್ಲಿ ಹೂಳು ತೆಗೆಯುವುದು ಅಸಾಧ್ಯವಾಗಿರುವ ಕಾರಣ ಸಮಾನಾಂತರ ಜಲಾಶಯ ನಿರ್ಮಾಣಕ್ಕೆ ಸರ್ಕಾರ ಸಿದ್ಧತೆ ನಡೆಸಿದೆ ಎಂದು ತುಂಗಭದ್ರಾ ಕಾಡಾ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ ಹೇಳಿದರು.
ಈ ಹಿಂದೆಯೇ ಜಲಾಶಯ ನಿರ್ಮಾಣವಾದ ತಕ್ಷಣದಲ್ಲಿ ಕೊಪ್ಪಳ, ವಿಜಯನಗರ, ರಾಯಚೂರು ಹಾಗೂ ಬಳ್ಳಾರಿ ಜಿಲ್ಲೆಯಲ್ಲಿ 7 ಕಡೆ ಸಮಾನಾಂತರ ಜಲಾಶಯ ನಿರ್ಮಿಸಲು ಉದ್ದೇಶಿಸಲಾಗಿತ್ತು. ಆದರೆ, ಈ ಯೋಜನೆಯು ಕಾರ್ಯಗತವಾಗಿಲ್ಲ. ಈ ನಡುವೆ ಈಗ ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ನವಲಿ ಬಳಿ ತುಂಗಭದ್ರಾ ನದಿಯ ಎಡಭಾಗದಲ್ಲಿ ಸುಮಾರು 12,000 ಕೋಟಿ ರೂಪಾಯಿಯಲ್ಲಿ, 34 ಟಿಎಂಸಿ ಸಾಮರ್ಥ್ಯದ ಸಮಾನಾಂತರ ಜಲಾಶಯ ನಿರ್ಮಿಸಲು ಉದ್ದೇಶಿಸಲಾಗಿದೆ.
23 ಸಾವಿರ ಎಕರೆ ಮುಳುಗಡೆ: ಉದ್ದೇಶಿತ ನವಲಿ ಸಮಾನಾಂತರ ಜಲಾಶಯಕ್ಕಾಗಿ ಒಟ್ಟು 23000 ಎಕರೆ ಪ್ರದೇಶ ಮುಳಗಡೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಇಲ್ಲಿ 9000 ಎಕರೆ ಪ್ರದೇಶವು ಸರ್ಕಾರಿ ಭೂಮಿ ಇದ್ದು. ಉಳಿದ 14,000 ಎಕರೆ ರೈತರ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಈ ಬಾರಿಯ ಬಜೆಟ್ನಲ್ಲಿ 1000 ಕೋಟಿ ರೂಪಾಯಿ ನೀಡಿದ್ದು, ಈ ಹಣದಲ್ಲಿ ಭೂ ಸ್ವಾಧೀನ ಕಾರ್ಯ ನಡೆಯಲಿದೆ. ಜಲಾಶಯದ ನೀರು ಬಳಕೆಗೆ ಕರ್ನಾಟಕ ಶೇ.65 ಹಾಗೂ ಶೇ.35ರಷ್ಟು ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳು ಪಾಲು ಹೊಂದಿವೆ.
ಉಪ ರಾಷ್ಟ್ರಪತಿಗಳ ಮೂಲಕ ಆಂಧ್ರದ ಮನವೊಲಿಕೆ: ಈಗ ಈ ಜಲಾಶಯ ನಿರ್ಮಿಸಲು ತೆಲಂಗಾಣ ಹಾಗೂ ಆಂಧ್ರಪ್ರದೇಶದ ಸರ್ಕಾರದ ಒಪ್ಪಿಗೆ ಬೇಕಾಗಿದೆ. ಈ ಕುರಿತು ರಾಜ್ಯ ಸರ್ಕಾರ ಉಪರಾಷ್ಟ್ರಪತಿಗಳ ಮುಖಾಂತರ ಎರಡು ರಾಜ್ಯಗಳ ಮುಖ್ಯಮಂತ್ರಿಗಳನ್ನು ಸಂಪರ್ಕಿಸಿ ಸಭೆ ನಡೆಸಲು ಮುಂದಾಗಿದ್ದಾರೆ ಎಂದರು. ಈಗ ಸರ್ಕಾರ ಜಲಾಶಯ ನಿರ್ಮಾಣಕ್ಕೆ ಮುಂದಾಗಿದೆ. ಕನಕಗಿರಿ ತಾಲೂಕು ಸಣ್ಣ ತಾಲೂಕಾಗಿದ್ದು ಇಲ್ಲಿ ಭೂ ಪ್ರದೇಶ ಕೂಡಾ ತೀರಾ ಕಡಿಮೆಯಾಗಿದೆ.
ಇಂತಹ ಸ್ಥಳದಲ್ಲಿ ಜಲಾಶಯ ನಿರ್ಮಿಸುವುದರಿಂದ ಕನಕಗಿರಿ ತಾಲೂಕಿನ ಸುಮಾರು 20 ಹಳ್ಳಿಗಳು ಬಾಧಿತವಾಗುತ್ತವೆ. ಈ ಜಲಾಶಯ ನಿರ್ಮಿಸುವುದರಿಂದ ಕನಕಗಿರಿ ತಾಲೂಕಿಗೆ ಯಾವುದೇ ಲಾಭವಾಗುವುದಿಲ್ಲ. ಅದಕ್ಕಾಗಿ ಇಲ್ಲಿ ಜಲಾಶಯ ನಿರ್ಮಿಸುವುದು ಬೇಡ ಎಂದು ರೈತರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ಹಿಂದೆ ನಿರ್ಮಿಸಲು ಉದ್ದೇಶಿಸಿರುವ ಬೆನ್ನೂರು, ಚಿಕಲಪರ್ವಿ ಸೇರಿದಂತೆ ಕೊಪ್ಪಳ ಹಾಗು ರಾಯಚೂರು ಜಿಲ್ಲೆಯ ವ್ಯಾಪ್ತಿಯ 4 ಸಮಾನಾಂತರ ಜಲಾಶಯಗಳ ನಿರ್ಮಾಣವಾಗಿಲ್ಲ.
ಇದು ಪ್ರಚಾರಕ್ಕೆ ಮಾತ್ರ ಸೀಮಿತವೇ?: ಈ ಮಧ್ಯೆ ರಾಜಕೀಯ ಲಾಭಕ್ಕಾಗಿ ನವಲಿ ಜಲಾಶಯ ನಿರ್ಮಿಸಲು ಹೊರಟಿದೆ. ನವಲಿ ಜಲಾಶಯಕ್ಕೆ ಈಗಾಗಲೇ ವಿಸ್ತೃತ ಯೋಜನಾ ವರದಿಯನ್ನು ಇಐ ಟೆಕ್ನಾಲಾಜಿ ರೂಫ್ ಎಂಬ ಕಂಪನಿಯು ಸರ್ಕಾರಕ್ಕೆ ಸಲ್ಲಿಸಿದೆ. ಸರ್ಕಾರವೇನೋ ಈ ಬಾರಿಯ ಬಜೆಟ್ನಲ್ಲಿ ಹಣ ಇಟ್ಟಿದೆ. ಇದೇ ವರ್ಷ ಚಾಲನೆ ನೀಡಿದರೆ ಮಾತ್ರ ಬಜೆಟ್ನಲ್ಲಿ ಘೋಷಣೆ ಮಾಡಿದಂತೆ ಕಾರ್ಯ ಆರಂಭವಾಗಬಹುದು. ಆದರೆ ವಿಳಂಬವಾದರೆ ನವಲಿ ಜಲಾಶಯ ನಿರ್ಮಾಣವು ಚುನಾವಣೆಯ ಪ್ರಚಾರಕ್ಕೆ ಮಾತ್ರ ಬಳಕೆಯಾಗಲಿದೆ ಎಂದು ಹುಲಿಹೈದರ ಗ್ರಾಮಸ್ಥ ಹನುಮೇಶ ಹುಳ್ಕಿಹಾಳ ಆರೋಪಿಸಿದ್ದಾರೆ.