ಕೊಪ್ಪಳ: ಜಿಲ್ಲೆಯಲ್ಲಿಂದು ಸಹ ಮಳೆ ಮುಂದುವರೆದಿದ್ದು, ನಗರದಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದೆ.
ಕಳೆದ ಎರಡು ಮೂರು ದಿನಗಳಿಂದ ಕೊಪ್ಪಳ ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಬಿಟ್ಟು ಬಿಟ್ಟು ಉತ್ತಮ ಮಳೆಯಾಗಿದ್ದು, ಮಲೆನಾಡ ವಾತಾವರಣ ನಿರ್ಮಾಣವಾಗಿದೆ. ನಿನ್ನೆಯಿಂದಲೇ ಸಂಪೂರ್ಣ ಮೋಡ ಕವಿದ ವಾತಾವರಣ ನಿರ್ಮಾಣವಾಗಿದೆ. ನಿನ್ನೆ ಸಂಜೆಯೂ ಸಹ ಉತ್ತಮ ಮಳೆಯಾಗಿದೆ. ಇಂದು ಬೆಳಗ್ಗೆ ಮಳೆ ಕಡಿಮೆಯಾಯಿತು ಎನ್ನುವಷ್ಟರಲ್ಲೇ ಮೋಡ ಮುಸುಕಿದ ವಾತಾವರಣ ಮಳೆ ಬರುವ ಮುನ್ಸೂಚನೆ ನೀಡಿದೆ.
ಮಧ್ಯಾಹ್ನ 12 ಗಂಟೆಯಿಂದ ಸಣ್ಣದಾಗಿ ಆರಂಭವಾದ ಮಳೆ ಒಂದು ಗಂಟೆಯ ವೇಳೆ ಧಾರಾಕಾರವಾಗಿ ಸುರಿಯಲಾರಂಭಿಸಿತು. ಮಳೆಯಿಂದ ಜಿಲ್ಲೆಯ ಜನರು ಫುಲ್ ಖುಷ್ ಆಗಿದ್ದಾರಾದ್ರೂ, ಕಳೆದ ಮೂರು ದಿನಗಳಿಂದ ಆಗಾಗ ಮಳೆ ಬರುತ್ತಿರೋದು ಕೃಷಿ ಚಟುವಟಿಕೆಗೆ ತೊಂದರೆಯಾಗಿದೆ.
ಅದರಲ್ಲೂ ಜಿಲ್ಲೆಯ ಕುಕನೂರು, ಯಲಬುರ್ಗಾ ತಾಲೂಕಿನಲ್ಲಿ ಹೆಸರು, ಶೇಂಗಾ ಬೆಳೆ ರಾಶಿ ಕಾರ್ಯ ನಡೆದಿದೆ. ಆದರೆ ಮಳೆಯಿಂದಾಗಿ ಕಟಾವು ಮಾಡಲಾಗಿರುವ ಬೆಳೆಗೆ ಹಾನಿಯಾಗುವ ಆತಂಕ ಎದುರಾಗಿದೆ.