ಕುಷ್ಟಗಿ(ಕೊಪ್ಪಳ): ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಪ್ರಸಕ್ತ ವರ್ಷದಲ್ಲಿ ಅಭಿವೃದ್ದಿ ಅನುದಾನ ಕಡಿತದ ಹಿನ್ನೆಲೆಯಲ್ಲಿ ಸರ್ಕಾರದ ಗಮನ ಸೆಳೆಯಲು ಕಲ್ಯಾಣ ಕರ್ನಾಟಕ ವ್ಯಾಪ್ತಿಯ 6 ಜಿಲ್ಲೆಯ ಸರ್ವ ಪಕ್ಷದ ಶಾಸಕರ ತುರ್ತು ಸಭೆಯನ್ನು ಬೆಂಗಳೂರಿನಲ್ಲಿ 25.06.2020 ರಂದು ಶಾಸಕರ ಭವನ 5ರಲ್ಲಿ (ಎರಡನೇ ಮಹಡಿಯ ಸಭಾಂಗಣ) ಕರೆಯಲಾಗಿದೆ ಎಂದು ಶಾಸಕ ಅಮರೇಗೌಡ ಪಾಟೀಲ ಬಯ್ಯಾಪುರ ಹೇಳಿದರು.
ಈ ಕುರಿತು ಮಾತನಾಡಿದ ಅವರು, ಕಲ್ಯಾಣ ಕರ್ನಾಟಕ 371 (ಜೆ) ವಿಶೇಷ ಸ್ಥಾನಮಾನವನ್ನು ಈಗಿನ ಸರ್ಕಾರ, ಹಿಂದಿನ ಸರ್ಕಾರ ಕಡೆಗಾಣಿಸುತ್ತ ಬಂದಿದೆ. 2020-21ನೇ ಸಾಲಿನಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಕಾರ್ಯದರ್ಶಿ, ಕಲಬುರಗಿ ಪ್ರಾದೇಶಿಕ ವಲಯ ಆಯುಕ್ತರು ಬರೆದ ಪತ್ರ ಲಭ್ಯವಾಗಿದೆ. ಆ ಪತ್ರದಲ್ಲಿ 1,100 ಕೋಟಿ ರೂ. ಮಂಜೂರು ಮಾಡುವ ಕುರಿತು ಪ್ರಸ್ತಾಪಿಸಿದ್ದಾರೆ ಎಂದರು.
ಈ ಹಿನ್ನೆಲೆಯಲ್ಲಿ ಕಡೇ ಪಕ್ಷ ಬಜೆಟ್ ಮಂಡನೆಯ ವೇಳೆಯಲ್ಲಿ ಘೋಷಿಸಿದ ಮೊತ್ತ 1500 ರೂ.ಕೋಟಿ ಪ್ರಸ್ತಾಪಿಸಿದ್ದನ್ನು ಬಿಡುಗಡೆಗೊಳಿಸಬೇಕು. ಕೋವಿಡ್-19 ಹಿನ್ನೆಲೆಯಲ್ಲಿ ಸರ್ಕಾರಕ್ಕೆ ನಿರ್ವಹಣೆಯ ಅರ್ಥಿಕ ಹೊರೆಯಾಗಿರುವ ಹಿನ್ನೆಲೆಯಲ್ಲಿ ಹಿಂದಿನ ಮುಖ್ಯಮಂತ್ರಿ 2,500 ಕೋಟಿ ರೂ. ಬೇಡಿಕೆ ಬದಲಿಗೆ, ಕಳೆದ ಬಜೆಟ್ನಲ್ಲಿ ಘೋಷಿಸಿದ 1500 ಕೋಟಿ ರೂ. ಮಂಜೂರು ಮಾಡಬೇಕು ಈ ಹಿನ್ನೆಲೆಯಲ್ಲಿ ಶಾಸಕರ ತುರ್ತು ಸಭೆ ಕರೆಯಲಾಗಿದೆ ಎಂದರು.
ಎಲ್ಲ ಶಾಸಕರಿಗೂ ಪತ್ರ ಬರೆಯಲಾಗಿದ್ದು, ಮೊಬೈಲ್ ಮೂಲಕ ಸಂಪರ್ಕಿಸಿ ಸಭೆಗೆ ಅಹ್ವಾನಿಸಲಾಗಿದ್ದು, ಎಲ್ಲರೂ ಸಹಮತ ವ್ಯಕ್ತಪಡಿಸಿದ್ದಾರೆ. ಈ ಸಭೆಯಲ್ಲಿ ಅನುದಾನ ಕಡಿತ ಮಾತ್ರವಲ್ಲ ಅನುಷ್ಠಾನದಲ್ಲಿ ಆಗಿರುವ ನ್ಯೂನ್ಯತೆ ಕುರಿತು ಚರ್ಚೆ ಹಾಗೂ ಪರಿಹಾರದ ಈ ಸಭೆಗೆ ಎಲ್ಲ ಸಮಾನ ಮನಸ್ಕ ಶಾಸಕರು, ಪಕ್ಷಾತೀತವಾಗಿ ಸ್ಪಂದಿಸಿದ್ದಾರೆ. ಈ ಮಹತ್ವದ ಸಭೆಗೆ ಕಲ್ಯಾಣ ಕರ್ನಾಟಕದ 6 ಜಿಲ್ಲೆಗಳ ಶಾಸಕರ ಸಮೂಹ ಸಾರಥ್ಯವಿದೆ ಎಂದರು.