ಗಂಗಾವತಿ (ಕೊಪ್ಪಳ): ನಮ್ಮ ಮನೆ ಕಾಂಪೌಡ್ನಲ್ಲಿ ಬೆಳೆಸಿರುವ ಗಿಡಮರಗಳಿಗೆ ವಿಶೇಷ ಕಾಳಜಿ ವಹಿಸಿ ಪ್ರತಿ ದಿನ ನೀರುಣಿಸುವ ನಾವು ಬೀದಿ ಬದಿಯ ಗಿಡಗಳ ಬಗ್ಗೆ ಅಷ್ಟೇನೂ ತಲೆ ಕೆಡಿಸಿಕೊಳ್ಳುವುದಿಲ್ಲ. ಆದರೆ ನಗರದ ಯುವಕನೊಬ್ಬ ತನ್ನ ಸ್ವಂತ ಖರ್ಚಿನಲ್ಲಿ ನಗರದ ಸಾವಿರಾರು ಗಿಡಗಳಿಗೆ ವಾರಕ್ಕೊಮ್ಮೆ ನೀರುಣಿಸುವ ಮೂಲಕ ಗಮನ ಸೆಳೆಯುತ್ತಿದ್ದಾರೆ.
ನಗರದ ಎಲ್ಐಸಿ ಆಫೀಸ್ ಸಮೀಪದ ನಿವಾಸಿ ಮಧುಚಂದ್ರ ಶೆಡ್ಡೆ ಎಂಬ ಯುವಕ ನಗರದಲ್ಲಿರುವ ಎಲ್ಲಾ ಮರಗಿಡಗಳಿಗೆ ನೀರುಣಿಸುವ ಕಾಯಕದಲ್ಲಿ ತೊಡಗಿದ್ದಾರೆ. ಈ ಮೂಲಕ ಪರಿಸರ ರಕ್ಷಣೆಯಲ್ಲಿ ತೊಡಗಿದ್ದಾರೆ. ಎಲ್ಲರೂ ಕೊರೊನಾದ ತುರ್ತು ಪರಿಸ್ಥಿತಿಯಲ್ಲಿ ತೊಡಗಿರುವಾಗ ಈ ಯುವಕ ಮಾತ್ರ ಪರಸರ ಸಂರಕ್ಷಣೆಗೆ ಮುಂದಾಗಿರುವುದು ಜನರ ಗಮನ ಸೆಳೆಯುತ್ತಿದೆ. 3 ಸಾವಿರ ಲೀಟರ್ ಸಾಮರ್ಥ್ಯದ ಒಂದು ಟ್ಯಾಂಕರ್ ತುಂಬಾ ನೀರು ತುಂಬಿಸಿ ಪ್ರತಿ ವಾರ ರಸ್ತೆ ಬದಿ ಗಿಡಗಳಿಗೆ ನೀರು ಹಾಯಿಸುತ್ತಾರೆ.
ಈ ಟ್ಯಾಂಕರ್ಗೆ ಒಂದು ಬಾರಿಗೆ ಒಂದು ಸಾವಿರ ರೂಪಾಯಿ ಬಾಡಿಗೆ ಇದೆ. ಆದರೆ ವಡ್ಡರಹಟ್ಟಿಯ ಟ್ಯಾಂಕರ್ ಉದ್ಯಮಿ ತಿಪ್ಪೇಸ್ವಾಮಿಗೌಡ ಎಂಬುವವರು, ಈ ಯುವಕನ ಕಾರ್ಯಕ್ಕೆ ಮೆಚ್ಚಿ ಉಚಿತವಾಗಿ ಟ್ಯಾಂಕರ್ನಲ್ಲಿ ಪೂರೈಕೆ ಮಾಡುತ್ತಿರುವುದಲ್ಲದೆ, ಯುವಕನಿಂದ ಪ್ರೇರಣೆ ಪಡೆದು ತಾವೂ ಗಿಡಗಳಿಗೆ ನೀರುಣಿಸುತ್ತಿದ್ದಾರೆ. ನಗರದ ಸಾವಿರಕ್ಕೂ ಹೆಚ್ಚು ಗಿಡಮರಗಳಿಗೆ ವಾರಕ್ಕೊಮ್ಮೆ ಟ್ಯಾಂಕರ್ನಲ್ಲಿ ಬಂದು ನೀರು ಹಾಯಿಸಿ ಹೋಗುವುದು ಇವರ ಕಾಯಕ.