ಗಂಗಾವತಿ (ಕೊಪ್ಪಳ): ಇಡೀ ಮನುಕುಲವನ್ನು ಕಾಡುತ್ತಿರುವ ಕೊರೊನಾ ವೈರಸ್ಗೆ ಭಾರತದಲ್ಲಿ ಉತ್ತಮ ಚಿಕಿತ್ಸೆ ಸಿಗುತ್ತಿದೆ. ಇದೇ ಕಾರಣಕ್ಕೆ ಇಲ್ಲಿನ ಸಾವಿನ ಪ್ರಮಾಣ ಶೇ.1.5 ಅಂದರೆ ನೂರಕ್ಕೆ ಕೇವಲ ಇಬ್ಬರು ಮಾತ್ರ ಸಾವನ್ನಪ್ಪುತ್ತಿದ್ದಾರೆ ಎಂದು ಡಿವೈಎಸ್ಪಿ ಚಂದ್ರಶೇಖರ ಹೇಳಿದರು.
ನಗರದ ಉಪ ವಿಭಾಗ ಆಸ್ಪತ್ರೆಯಲ್ಲಿ ಮಾತನಾಡಿದ ಅವರು, ಇಡೀ ವಿಶ್ವದಲ್ಲಿ ಯಾವುದಾದರೂ ದೇಶದಲ್ಲಿ ಅತ್ಯುತ್ತಮ ಮತ್ತು ಉಚಿತ ಗುಣಮಟ್ಟದ ಚಿಕಿತ್ಸೆ ಕೊರೊನಾ ರೋಗಿಗಳಿಗೆ ಸಿಗುತ್ತಿದೆ ಎಂದರೆ ಅದು ಕೇವಲ ಭಾರತದಲ್ಲಿ ಮಾತ್ರ. ಸ್ಪೇನ್, ಅಮೆರಿಕ, ಇಟಲಿ ಹೀಗೆ ಮುಂದುವರಿದ ಇತರ ದೇಶಗಳಿಗೆ ಹೋಲಿಸಿದರೆ ಯಾವುದೇ ದೇಶದಲ್ಲಿ ಉಚಿತ ಚಿಕಿತ್ಸೆ ಇಲ್ಲ. ಕೋಟ್ಯಂತರ ರೂಪಾಯಿ ಮೊತ್ತವನ್ನು ಅಲ್ಲಿನ ನಾಗರಿಕರೇ ಆಸ್ಪತ್ರೆಯ ವೆಚ್ಚ ಭರಿಸಬೇಕಿದೆ ಎಂದರು.
ಅದೃಷ್ಟವಶಾತ್ ನಮ್ಮಲ್ಲಿ ಅಂತಹ ವ್ಯವಸ್ಥೆ ಇಲ್ಲ. ಮುಖ್ಯವಾಗಿ ಕೊರೊನಾದ ಬಗ್ಗೆ ಯಾರೂ ಹೆದರುವ ಅಗತ್ಯವಿಲ್ಲ. ಕೊಂಚ ಜಾಗೃತರಾಗಿದ್ದರೆ ಸಾಕು. ಕಳೆದ ಮಾರ್ಚ್ನಿಂದ ಇಲ್ಲಿವರೆಗೆ ನಿರಂತರವಾಗಿ ವಿವಿಧ ಇಲಾಖೆಯ ಅಧಿಕಾರಿಗಳು ಶ್ರಮಿಸುತ್ತಿದ್ದೇವೆ ಎಂದರು.