ಗಂಗಾವತಿ: ಇಲ್ಲಿನ ಉಪ ವಿಭಾಗ ಕಚೇರಿಯಲ್ಲಿ ಪ್ರಸಕ್ತ ವರ್ಷ ಗ್ರಾಮೀಣ ಭಾಗದಲ್ಲಿ ನಿರ್ವಹಿಸಿದ ನರೇಗಾ ಕಾಮಗಾರಿಗೆ ಸಂಬಂಧಿಸಿದ ಕಡತಗಳು ನಾಪತ್ತೆಯಾಗಿವೆ. ಈ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ಜಿಲ್ಲಾ ಪಂಚಾಯತ್ ಅಧ್ಯಕ್ಷ ವಿಶ್ವನಾಥ ರೆಡ್ಡಿ ಹೊಸಮನಿ ಸ್ಥಳಕ್ಕೆ ದಿಢೀರ್ ಭೇಟಿ ನೀಡಿದರು.
ಮರಳಿ ಹೋಬಳಿಯ ನಾನಾ ಗ್ರಾಮಗಳಲ್ಲಿ ಕೈಗೊಂಡ ಕಾಮಗಾರಿಗಳ ಕಡತ ನಾಪತ್ತೆಯಾಗಿವೆ ಎಂದು ಆರೋಪಿಸಿ ಗ್ರಾಮಗಳ ಮುಖಂಡರು ಉಪ ವಿಭಾಗ ಕಚೇರಿಗೆ ಮುತ್ತಿಗೆ ಹಾಕಿ ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡರು.
ವಿಶ್ವನಾಥ ರೆಡ್ಡಿ, ಕಡತ ಎಲ್ಲಿಗೂ ಹೋಗಿರುವುದಿಲ್ಲ. ಒಮ್ಮೆ ಪರಿಶೀಲಿಸುವಂತೆ ಕಚೇರಿಯ ಸಿಬ್ಬಂದಿಗೆ ಸೂಚನೆ ನೀಡಿ ಗ್ರಾಮಸ್ಥರನ್ನು ಸಮಾಧಾನಪಡಿಸಿದರು. ಕೆಲ ಕಡತ ಸಿಕ್ಕವು. ಆದರೆ ಕಾಮಗಾರಿಗೆ ಸಂಬಂಧಿಸಿದಂತೆ ಬಿಲ್ ಹಂತಕ್ಕೆ ಹೋಗಿ ಅಲ್ಲಿ ಅಧಿಕಾರಿಗಳು ಸಹಿ ಮಾಡದೇ ಬಿಟ್ಟಿರುವುದು ಕಂಡು ಬಂತು. ಕೂಡಲೇ ಇಲ್ಲಿಂದ ವರ್ಗಾವಣೆಯಾಗಿರುವ ಅಧಿಕಾರಿಗಳನ್ನು ಕರೆಯಿಸಿ ಸಹಿ ಮಾಡಿಸುವಂತೆ ಕೆಲವರು ಪಟ್ಟು ಹಿಡಿದರು.
ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಅಧ್ಯಕ್ಷರು, ಕೆಲ ಅಧಿಕಾರಿಗಳು ಸೇವೆಯಿಂದ ಅಮಾನತಾಗಿದ್ದಾರೆ. ಇನ್ನು ಕೆಲವರು ಮಾತೃ ಇಲಾಖೆಗೆ ಹೋಗಿದ್ದಾರೆ. ಹಳೆಯ ದಿನಾಂಕದ ಕಡತಕ್ಕೆ ಹೇಗೆ ಸಹಿ ಮಾಡಲು ಬರುತ್ತದೆ. ಕಾನೂನಿನ ಅರಿವಿಟ್ಟುಕೊಂಡು ಮಾತನಾಡಿ ಎಂದು ತಾಕೀತು ಮಾಡಿದರು.