ಗಂಗಾವತಿ: ಸರ್ಕಾರಿ ಆಸ್ತಿ ನಷ್ಟ ಪ್ರಕರಣವೊಂದರ ಆರೋಪಿಯಾಗಿರುವ ಶಾಸಕ ಬಸವರಾಜ ದಡೇಸೂಗುರು ಸತತವಾಗಿ ನ್ಯಾಯಾಲಯಕ್ಕೆ ಗೈರು ಹಾಜರಾಗಿದ್ದರಿಂದ ಕೋರ್ಟ್ ವಾರೆಂಟ್ ಜಾರಿ ಮಾಡಲಾಗಿತ್ತು. ಬಂಧನ ಭೀತಿಯಲ್ಲಿದ್ದ ದಡೇಸೂಗುರು ಕೋರ್ಟ್ಗೆ ದೌಡಾಯಿಸಿ ಬಂದರು.
2013 ಸೆಪ್ಟಂಬರ್ 23ರಲ್ಲಿ ನದಿ ಪಾತ್ರದ ಜನರ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗುವಂತೆ 24 ಗಂಟೆ ವಿದ್ಯುತ್ ಪೂರೈಸಬೇಕು ಎಂದು ಆಗ್ರಹಿಸಿ ಬಸವರಾಜ ದಡೇಸೂಗುರು ಕಾರಟಗಿ ಜೆಸ್ಕಾಂ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದ್ದರು. ಆ ವೇಳೆ ಕಚೇರಿಗೆ ಬೆಂಕಿ ಹಚ್ಚಲು ಮುಂದಾಗಿದ್ದರು, ಇದರಿಂದ ಸರ್ಕಾರದ ಆಸ್ತಿಗೆ ನಷ್ಟವಾಗಿದೆ ಎಂಬ ಆರೋಪದ ಹಿನ್ನೆಲೆ ಅವರನ್ನು ವಿಚಾರಣೆಗೆ ಹಾಜರಾಗುವಂತೆ ಕೋರ್ಟ್ ಆದೇಶ ಹೊರಡಿಸಿತ್ತು.
ಅಂದಿನ ಜೆಸ್ಕಾಂ ಎಇಇ ರಾಮಚಂದ್ರ ಸುತಾರ ಅವರು ಬಸವರಾಜ ಹಾಗೂ ಇತರೆ ಐವರ ವಿರುದ್ಧ ಅಂದಿನ ಶಾಸಕರಾಗಿದ್ದ ಶಿವರಾಜ ತಂಗಡಗಿ ನಿರ್ದೇಶನದ ಮೇರೆಗೆ ದೂರು ದಾಖಲಿಸಲಾಗಿತ್ತು.
ಕಳೆದ ಮೂರು ವರ್ಷಗಳಿಂದ ದಡೇಸೂಗುರು ವಿಚಾರಣೆಗೆ ಗೈರು ಹಾಜರಾಗಿದ್ದರು. ಇಲ್ಲಿನ ಪ್ರಧಾನ ಸಿವಿಲ್ ನ್ಯಾಯಾಲಯ ವಾರಂಟ್ ಜಾರಿ ಮಾಡಿ ಕೋರ್ಟ್ಗೆ ಹಾಜರಾಗುವಂತೆ ವಾರೆಂಟ್ ಹೊರಡಿಸಲಾಗಿತ್ತು.