ಕೊಪ್ಪಳ: ಕೊರೊನಾ ಸೋಂಕು ಗಾಳಿಯ ಮೂಲಕ ಹರಡುವ ವೈರಸ್ ಅಲ್ಲ. ಹೀಗಾಗಿ ನಗರದ ಕೋವಿಡ್-19 ಆಸ್ಪತ್ರೆಯ ಬಳಿ ಎಸ್ಎಸ್ಎಲ್ಸಿ ಪರೀಕ್ಷಾ ಕೇಂದ್ರ ಮಾಡಿರುವುದರಿಂದ ಏನೂ ತೊಂದರೆಯಾಗುವುದಿಲ್ಲ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಈ ಕುರಿತಂತೆ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿದ ಅವರು, ಈಗ ಕೋವಿಡ್-19 ಆಸ್ಪತ್ರೆಯಲ್ಲಿ ಕೊರೊನೇತರ ಸೇವೆ ಪ್ರಾರಂಭಿಸಲಾಗಿದೆ. ಕೋವಿಡ್ ಹಾಗೂ ಕೋವಿಡ್ಯೇತರ ವಿಭಾಗಗಳಾಗಿ ವಿಂಗಡಣೆ ಮಾಡಲಾಗಿದೆ. ಎರಡಕ್ಕೂ ಪ್ರವೇಶ ಹಾಗೂ ನಿರ್ಗಮನಕ್ಕೆ ಬೇರೆ ಬೇರೆ ವ್ಯವಸ್ಥೆ ಇದೆ ಎಂದು ತಿಳಿಸಿದರು.
ತಾಂತ್ರಿಕವಾಗಿ ಕೋವಿಡ್-19 ಆಸ್ಪತ್ರೆಯಿಂದ ಪರೀಕ್ಷಾ ಕೇಂದ್ರ 100 ಮೀಟರ್ಗೂ ದೂರವಿದೆ. ಕೊರೊನಾ ಸೋಂಕು ಗಾಳಿಯಿಂದ ಹರಡುವುದಿಲ್ಲ. ಪರೀಕ್ಷಾ ಕೇಂದ್ರಗಳಲ್ಲಿ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಕೊರೊನಾ ಬಗ್ಗೆ ಜನರಿಗೆ ಭಯವಿರೋದು ನಿಜ. ಆದರೆ ಇಂತಹ ಸಂದರ್ಭದಲ್ಲಿ ಯಾರೂ ಕೂಡ ಪಾಲಕರಲ್ಲಿ ಹಾಗೂ ಮಕ್ಕಳಲ್ಲಿ ಭಯ ಹುಟ್ಟಿಸುವ ಕೆಲಸ ಮಾಡಬಾರದು ಎಂದು ಮನವಿ ಮಾಡಿದರು.
ಪಾಲಕರಿಗೆ ಈ ಬಗ್ಗೆ ಜಾಗೃತಿ ಮೂಡಿಸಬೇಕು. ಕೋವಿಡ್-19 ಆಸ್ಪತ್ರೆ ಬಳಿ ಪರೀಕ್ಷಾ ಕೇಂದ್ರವಿರುವುದರಿಂದ ಯಾವುದೇ ತೊಂದರೆ ಇಲ್ಲ. ಎಲ್ಲವನ್ನೂ ಅವಲೋಕಿಸಿಯೇ ಎಲ್ಲಾ ಕಡೆಗೂ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಸ್ಪಷ್ಟನೆ ನೀಡಿದರು.