ಕುಷ್ಟಗಿ (ಕೊಪ್ಪಳ): ಕುಷ್ಟಗಿ ತಾಲೂಕಿನಲ್ಲಿ ದೋಟಿಹಾಳ ಸೇರಿದಂತೆ ಕುಷ್ಟಗಿ, ಹನುಮನಾಳ, ತಾವರಗೇರಾ, ಹನುಮಸಾಗರ ರೈತ ಸಂಪರ್ಕ ಕೇಂದ್ರಗಳಲ್ಲಿ ಹಿಂಗಾರು ಹಂಗಾಮಿನ ಬಿತ್ತನೆ ಬೀಜ ಲಭ್ಯವಿದ್ದು, ಯಾವುದೇ ಕಾರಣಕ್ಕೂ ಬಿತ್ತನೆ ಬೀಜದ ಕೊರತೆಯಾಗದು ಎಂದು ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ರೈತರಿಗೆ ಅಭಯ ನೀಡಿದರು.
ಕುಷ್ಟಗಿ ರೈತ ಸಂಪರ್ಕ ಕೇಂದ್ರದಲ್ಲಿ 2020-21ನೇ ಸಾಲಿನ ಹಿಂಗಾರು ಹಂಗಾಮಿನ ಬಿಳಿಜೋಳ, ಕಡಲೆ ಬಿತ್ತನೆ ಬೀಜ ಫಲಾನುಭವಿ ರೈತರಿಗೆ ವಿತರಿಸಿ ಮಾತನಾಡಿದ ಅವರು, ಈ ಯೋಜನೆಯಲ್ಲಿ ಸಣ್ಣ, ಅತಿ ಸಣ್ಣ ಎಸ್ಸಿ, ಎಸ್ಟಿ ರೈತರಿಗೆ ವಿತರಿಸಲಾಗುತ್ತಿದೆ. ಒಂದು ವೇಳೆ ಎರಡ್ಮೂರು ದಿನಗಳಲ್ಲಿ ಬಿತ್ತನೆ ಬೀಜ ಕೊರತೆಯಾದಲ್ಲಿ ಸರ್ಕಾರಕ್ಕೆ ಮನವಿ ಸಲ್ಲಿಸಿ ಮತ್ತೆ ತರಿಸಿಕೊಡಲಾಗುವುದು ಎಂದರು.
ಈ ಕುರಿತು ಕೃಷಿ ಮಂತ್ರಿ ಬಿ.ಸಿ. ಪಾಟೀಲ ಅವರೊಂದಿಗೆ ಚರ್ಚಿಸಲಾಗಿದೆ. ಬಿತ್ತನೆ ಬೀಜದ ದರ ಗುತ್ತಿಗೆಯಾಗಿದ್ದು, 3 ಕೆ.ಜಿ. ಬಿಳಿಜೋಳದ ಬಿತ್ತನೆ ಬೀಜಕ್ಕೆ ಸರ್ಕಾರದ ದರ 171 ರೂ, ಸಾಮಾನ್ಯ ಜನರಿಗೆ 60 ರೂ, ಸಬ್ಸಿಡಿ, ಎಸ್ಸಿ,ಎಸ್ಟಿ 91 ರೂ. ಸಬ್ಸಿಡಿ ಇದೆ. ಇನ್ನು ಕಡಲೆಗೆ 20 ಕೆ.ಜಿಯ ಪಾಕೆಟ್ ಸರ್ಕಾರದ ದರ 1,400 ರೂ., ಸಾಮಾನ್ಯ ಜನರಿಗೆ 500 ಸಬ್ಸಿಡಿ, ಎಸ್ಸಿಎಸ್ಟಿ 750 ಸಬ್ಸಿಡಿ ಇದೆ ಎಂದರು.
ಇದೇ ವೇಳೆ, ಸಹಾಯಕ ಕೃಷಿ ನಿರ್ದೇಶಕ ಮಹಾದೇವಪ್ಪ ನಾಯಕ್, ಕೃಷಿ ಅಧಿಕಾರಿ ಬಾಲಪ್ಪ ಜಲಗೇರಿ, ರಾಘವೇಂದ್ರ ಕೊಂಡಗುರಿ, ಬಸವರಾಜ್ ಪಾಟೀಲ ಇತರರು ಇದ್ದರು.
ಮೊದಲ ದಿನವೇ ನೂಕು ನುಗ್ಗಲು : ಪ್ರಸಕ್ತ ಸಾಲಿನ ಹಿಂಗಾರು ಹಂಗಾಮಿನ ಬಿತ್ತನೆ ಬೀಜಗಳ ವಿತರಣೆ ಹಿನ್ನೆಲೆಯಲ್ಲಿ ರೈತರಿಂದ ನೂಕು ನುಗ್ಗಲಿಗೆ ಕಾರಣವಾಯಿತು. ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಮಳೆಯಿಂದ ಇನ್ನೂ ಭೂಮಿಯ ತೇವಾಂಶ ಅರಿಲ್ಲ, ಬಿತ್ತನೆಗೆ ಇನ್ನೂ ಎರಡ್ಮೂರು ದಿನ ಬೇಕಾಗಬಹುದು. ಬಿತ್ತನೆ ಬೀಜದ ಅಭಾವದ ಆತಂಕ ಬೇಡ ಎಂದು ತಿಳಿಸಿದರೂ, ಸಾಮಾಜಿಕ ಅಂತರವಿಲ್ಲದೇ ರೈತರು ಜಮಾವಣೆಗೊಂಡಿರುವುದು ಕಂಡು ಬಂತು. ರೈತರು ತಾವು ಸರದಿಯಲ್ಲಿ ನಿಲ್ಲದೇ ದಾಖಲೆಗಳನ್ನು ಸರತಿ ಸಾಲಿನಲ್ಲಿಟ್ಟು ಬಿತ್ತನೆ ಬೀಜಕ್ಕಾಗಿ ಕಾಯುತ್ತಿರುವುದು ಕಂಡು ಬಂತು.