ಗಂಗಾವತಿ (ಕೊಪ್ಪಳ) : ಬಸ್ಸಿನಲ್ಲಿ ಹೆಣ್ಮಕ್ಕಳು ಫ್ರಿಯಾಗಿ ಓಡಾಡಾಕ ಶುರುವಾದಾಗಿನಿಂದ ಒಂದೂ ಬಸ್ ಖಾಲಿ ಇರವಲ್ವು. ಮನಿ ಬಿಟ್ಟು ಬಂದು ಗುಡಿಗೆ ಹೋಗಣಾಂದ್ರ ಹೈರಾಣ ಆಗಿವಿ. ಈ ಫ್ರೀ ಬಸ್ ಬಿಟ್ಟು ಸರ್ಕಾರದೋರು ಜನರಿಗೆ ಬೇಕಾದ ಅಕ್ಕಿ, ಸಿಲಿಂಡರ್, ಮನೆ ಕೊಡ್ಲಿ'.. ಹೀಗೆಂದು ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಮಹಿಳೆಯರ ಉಚಿತ ಸಾರಿಗೆ ಪ್ರಯಾಣಕ್ಕೆ ಅವಕಾಶ ಇರುವ ಶಕ್ತಿ ಯೋಜನೆಯ ಬಗ್ಗೆ ಕೆಲ ಮಹಿಳೆಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶನಿವಾರ ಆಗಿದ್ದರಿಂದ ಗಂಗಾವತಿ ತಾಲೂಕಿನ ಹಲವು ಗ್ರಾಮಗಳಿಂದ ಇಲ್ಲಿನ ಆನೆಗೊಂದಿ ಸಮೀಪದ ಅಂಜನಾದ್ರಿಗೆ ತೆರಳಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ಬಸ್ ನಿಲ್ದಾಣಕ್ಕೆ ಬಂದಿದ್ದರು. ಬಸ್ ನಿಲ್ದಾಣದಲ್ಲಿ ಕೆಲವು ಗಂಟೆಗಳ ಕಾಲ ಕಾದರೂ ವಾಹನ ಸಿಗದೇ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಇದರಿಂದ ಮಕ್ಕಳೊಂದಿಗೆ ದೇವಾಲಯಕ್ಕೆ ತೆರಳಲು ಆಗಮಿಸಿದ್ದ ಕೆಲ ಮಹಿಳೆಯರು ತೀವ್ರ ಅಸಮಾಧಾನ ಹೊರಹಾಕಿದ್ರು.
ಇದನ್ನೂ ಓದಿ: Free Bus Scheme: ಶನಿವಾರ 58 ಲಕ್ಷ ಮಹಿಳೆಯರಿಂದ 'ಶಕ್ತಿ' ಪಯಣ.. 2 ವಾರದ ಉಚಿತ ಟಿಕೆಟ್ ಮೌಲ್ಯ 166 ಕೋಟಿ ರೂ.
ಉಚಿತ ಸಾರಿಗೆ ಸೌಲಭ್ಯ ಬೇಡ: ರಾಜ್ಯ ಸರ್ಕಾರ ಮಹಿಳೆಯರಿಗೆ ಕಲ್ಪಿಸಿರುವ ಉಚಿತ ಸಾರಿಗೆ ಯೋಜನೆಯನ್ನು ಸ್ಥಗಿತಗೊಳಿಸಬೇಕು. ಇದರ ಬದಲು ಬಡವರಿಗೆ ಉಪಯುಕ್ತವಾಗುವ ಅಕ್ಕಿ, ಮನೆ ಇಲ್ಲದವರಿಗೆ ನಿವೇಶನ, ಮನೆ ನಿರ್ಮಾಣ, ಅಡುಗೆ ಸಿಲಿಂಡರ್ ಮುಂತಾದವುಗಳನ್ನು ಕೊಡಲಿ ಎಂದು ಬಸಾಪಟ್ಟಣದ ದುರ್ಗಮ್ಮ ಎಂಬವರು ಒತ್ತಾಯಿಸಿದ್ದಾರೆ.
ಪ್ರಯಾಣಿಸಲು ಬಸ್ ಸಿಕ್ತಾ ಇಲ್ಲ. ಸಿಕ್ಕರೂ ಅಲ್ಲಿ ಸ್ಥಳವಕಾಶ ಇಲ್ಲ. ತುಂಬಿದ ಬಸ್ಗಳನ್ನು ಚಾಲಕರು ಜನ ಹತ್ತುತ್ತಿರುವಾಗಲೇ ಚಲಾಯಿಸಿಕೊಂಡು ಹೋಗುತ್ತಿದ್ದಾರೆ. ಈ ವೇಳೆ ಮಕ್ಕಳು, ಮಹಿಳೆಯರು ವಾಹನದಿಂದ ಬಿದ್ದು ಏನಾದರೂ ಆದರೆ ಅದಕ್ಕೆ ಯಾರು ಜವಾಬ್ದಾರರು ಎಂದು ಪ್ರಶ್ನಿಸಿದರು.
ಅಂಜನಾದ್ರಿಯಲ್ಲಿ ಹೆಚ್ಚಿದ ಮಹಿಳಾ ಯಾತ್ರಾರ್ಥಿಗಳ ಸಂಖ್ಯೆ : ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸಿದ ಬಳಿಕ ತಾಲ್ಲೂಕಿನ ಪ್ರಮುಖ ಧಾರ್ಮಿಕ ಕ್ಷೇತ್ರವಾಗಿರುವ ಅಂಜನಾದ್ರಿಯಲ್ಲಿ ಶನಿವಾರ ಮಹಿಳಾ ಯಾತ್ರಾರ್ಥಿಗಳ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದೆ. ಅಂಜನಾದ್ರಿಗೆ ಕೇವಲ ಕೊಪ್ಪಳ ಮಾತ್ರವಲ್ಲದೇ ನೆರೆ ಹೊರೆಯ ಜಿಲ್ಲೆಗಳಿಂದಲೂ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ.
ಹೊಸಪೇಟೆ, ಕಂಪ್ಲಿ, ಕುರುಗೋಡು, ಹಗರಿಬೊಮ್ಮನಹಳಿ, ಕೂಡ್ಲಗಿ, ಕೊಟ್ಟೂರು, ಹರಪನಹಳ್ಳಿ, ಯಲಬುರ್ಗಾ, ಕುಷ್ಟಗಿ, ಗದಗ, ಇಲಕಲ್, ಬಳ್ಳಾರಿ, ಆಂಧ್ರ ಪ್ರದೇಶದ ಅನಂತಪುರ ಸೇರಿದಂತೆ ನಾನಾ ತಾಲ್ಲೂಕು, ಜಿಲ್ಲಾ ಕೇಂದ್ರಗಳಿಂದ ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿ ಅಂಜನಾದ್ರಿಗೆ ಆಗಮಿಸಿದ್ದರು.
ವಸ್ತ್ರ ಸಂಹಿತೆ ಜಾರಿಗೆ ಒತ್ತಾಯ : ಅಂಜನಾದ್ರಿಗೆ ಆಗಮಿಸುವ ಭಕ್ತರು, ಯಾತ್ರಾರ್ಥಿಗಳಿಗೆ ವಸ್ತ್ರಸಂಹಿತೆ (ಡ್ರೆಸ್ ಕೋಡ್) ಜಾರಿ ಮಾಡಬೇಕು ಎಂದು ಕೆಲ ಭಕ್ತರು ಒತ್ತಾಯಿಸಿದ್ದಾರೆ. ಅಂಜನಾದ್ರಿ ದರ್ಶನಕ್ಕೆ ವಿದೇಶಿಗರು ಆಗಮಿಸುತ್ತಿದ್ದಾರೆ. ಇದರಿಂದ ವಸ್ತ್ರ ಸಂಹಿತೆ ಜಾರಿಗೊಳಿಸುವಂತೆ ಒತ್ತಾಯ ಕೇಳಿಬಂದಿದೆ.
ಇದನ್ನೂ ಓದಿ : ಹಾಡು ಹಾಡುತ್ತ ಟಿಕೆಟ್ ನೀಡುವ ರಾಯಚೂರಿನ ಕಂಡಕ್ಟರ್.. ಮಹಿಳೆಯರು ಕಿಲ ಕಿಲ - ವಿಡಿಯೋ