ಗಂಗಾವತಿ: ತಾಲೂಕಿನ ಕುಂಟೋಜಿ ಗ್ರಾಮದಲ್ಲಿರುವ ಸಾಮಾಜಿಕ ಅರಣ್ಯ ಇಲಾಖೆ ಕಾಯ್ದಿಟ್ಟ ಅರಣ್ಯ ಪ್ರದೇಶಕ್ಕೆ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಹರ್ಷಭಾನು ಹಾಗು ತರಬೇತಿ ಐಎಎಸ್ ಅಧಿಕಾರಿ ವರ್ಣೀತ್ ನೇಗಿ ದಿಢೀರ್ ಭೇಟಿ ನೀಡಿದರು.
ಸಾರ್ವಜನಿಕರು ಮತ್ತು ಪರಿಸರ ಪ್ರೇಮಿಗಳ ಸಹಭಾಗಿತ್ವದಲ್ಲಿ ಅರಣ್ಯ ಇಲಾಖೆ, ಉದ್ದೇಶಿತ ಸ್ಥಳದಲ್ಲಿ ಸಾಕಷ್ಟು ಪರಿಸರ ಸಂರಕ್ಷಿಸಿ ಅರಣ್ಯ ಅಭಿವೃದ್ಧಿಗೆ ಪೂರಕ ಚಟುವಟಿಕೆ ಕೈಗೊಳ್ಳುತ್ತಿರುವ ಹಿನ್ನೆಲೆ, ಅಧಿಕಾರಿಗಳ ತಂಡ ಭೇಟಿ ನೀಡಿ ಪರಶೀಲನೆ ನಡೆಸಿತು.
ಈ ಸಂದರ್ಭದಲ್ಲಿ ಹಾಜರಿದ್ದ ತಾಲೂಕು ಪಂಚಾಯತ್ ಅಧ್ಯಕ್ಷ ಮೊಹಮ್ಮದ್ ರಫಿ, ಕುಂಟೋಜಿ ಅರಣ್ಯಧಾಮವನ್ನು ನವಲು ಅಥವಾ ಪಕ್ಷಿಧಾಮವನ್ನಾಗಿ ಪರಿವರ್ತಿಸಲು ಇಲಾಖೆಯಿಂದ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಮನವಿ ಸ್ವೀಕರಿಸಿದ ಡಿಎಫ್ಓ ಹರ್ಷಭಾನು, ಈ ಬಗ್ಗೆ ಪರಿಶೀಲಿಸಲಾಗುವುದು. ಸರ್ಕಾರದ ಮಟ್ಟದಲ್ಲಿ ಈ ಕ್ರಿಯೆ ನಡೆಯಬೇಕಿರುವ ಹಿನ್ನೆಲೆ ಕಾಲವಕಾಶ ಹಿಡಿಯಲಿದೆ ಎಂದು ತಿಳಿಸಿದರು. ಆದಷ್ಟು ತ್ವರಿತವಾಗಿ ಈ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳಿಸುವುದಾಗಿ ಅಧಿಕಾರಿ ಭರವಸೆ ನೀಡಿದರು.