ಬೆಂಗಳೂರು/ಕೊಪ್ಪಳ/ಹಾವೇರಿ: ರಾಜ್ಯದೆಲ್ಲೆಡೆ ಉಲ್ಬಣಗೊಂಡ ಕೋವಿಡ್ ತತೆಗೆ ಜನತಾ ಕರ್ಫ್ಯೂ ಆಗಿ ಇದೀಗ ಲಾಕ್ಡೌನ್ ಜಾರಿಯಲ್ಲಿದೆ. ಇದ್ರ ಪರಿಣಾಮ ಕುಕ್ಕುಟೋದ್ಯಮದ ಮೇಲೂ ಬಿದ್ದಿದ್ದು, ಪೌಲ್ಟ್ರಿ ಮಾಲೀಕರು, ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಲಾಕ್ಡೌನ್ನಿಂದ ಹೋಟೆಲ್, ಫಾಸ್ಟ್ ಫುಡ್ ಸೆಂಟರ್, ಮಾಲ್ಗಳು ಬಂದ್ ಆಗಿದ್ದು, ಕೋಳಿಗಳಿಗೆ ಬೆಡಿಕೆ ಇಲ್ಲದಂತಾಗಿದೆ. ಬೆಳಗ್ಗೆ ನಿಗದಿಪಡಿಸಿರುವ ಅವಧಿಯಲ್ಲಿ ಉತ್ತಮ ವ್ಯಾಪಾರ ಆಗುತ್ತಿಲ್ಲ. ಹಾಗಾಗಿ ಪೌಲ್ಟ್ರಿ ಫಾರಂನಿಂದ ಮಧ್ಯವರ್ತಿಗಳು ಅತಿ ಕಡಿಮೆ ಬೆಲೆಗೆ ಕೋಳಿ ಖರೀದಿಸುತ್ತಿದ್ದು, ಬೆಂಗಳೂರಿನ ಕುಕ್ಕುಟೋದ್ಯಮ ನಷ್ಟ ಅನುಭವಿಸುತ್ತಿದೆ.
ಕೊಪ್ಪಳ ಜಿಲ್ಲೆಯಲ್ಲೂ 30 ಪೌಲ್ಟ್ರಿ ಫಾರಂಗಳಿದ್ದು, ನೂರಾರು ಮಂದಿ ಕೆಲಸ ಮಾಡುತ್ತಿದ್ದಾರೆ. ಇದೀಗ ಲಾಕ್ಡೌನ್ನಿಂದ ಕಾರ್ಮಿಕರಿಗೂ ಕೆಲಸಕ್ಕೆ ಬರಲು ಆಗುತ್ತಿಲ್ಲ. ಜತೆಗೆ ಕೋಳಿ, ಮೊಟ್ಟೆ ಸಾಗಣೆಯೂ ಸರಿಯಾಗಿ ಆಗದೆ ಶೇ. 30ರಷ್ಟು ವ್ಯಾಪಾರ-ವಹಿವಾಟು ಕಡಿಮೆಯಾಗಿದೆ ಅಂತಾರೆ ಪೌಲ್ಟ್ರಿ ಫಾರಂ ಉದ್ಯೋಗಿಗಳು.
ಬೆಳಗಿನ ನಿಗದಿತ ಸಮಯದಲ್ಲಿ ಕೋಳಿ, ಮೊಟ್ಟೆ ಕೊಳ್ಳುವವರಿಲ್ಲದೇ ಇದಕ್ಕೆ ಬೇಡಿಕೆ ಕಡಿಮೆಯಾಗಿದೆ. ಕಾರ್ಮಿಕರಿಗೆ ಫಾರಂಗೆ ಬರಲು ಮತ್ತು ಕೋಳಿ, ಮೊಟ್ಟೆ ಸಾಗಿಸಲು ಲಾಕ್ಡೌನ್ ಕೊಂಚ ಅಡ್ಡಿಯಾಗಿದೆ. ಹೀಗೆ ನಾನಾ ಸಮಸ್ಯೆಯಿಂದ ಹಾವೇರಿ ಪೌಲ್ಟ್ರಿ ಫಾರಂಗಳು ಸಂಕಷ್ಟಕ್ಕೆ ಸಿಲುಕಿವೆ.
ರಾಜ್ಯದ ಪ್ರತೀ ಕ್ಷೇತ್ರಕ್ಕೂ ಕೋವಿಡ್ ಹೊಡೆತ ಕೊಟ್ಟಿದ್ದು, ಇದೀಗ ಪೌಲ್ಟ್ರಿ ಫಾರಂನವರು ಕೂಡ ಸಂಕಷ್ಟದ ಸುಳಿಯಲ್ಲಿ ಸಿಲುಕಿದ್ದಾರೆ. ಹಾಗಾಗಿ ಸೋಂಕನ್ನು ಸಂಪೂರ್ಣವಾಗಿ ಸದೆಬಡಿಯಲು ಸರ್ವರೂ ಸನ್ನದ್ಧರಾಗಬೇಕಿದೆ.