ಕೊಪ್ಪಳ: ದಿನೇ ದಿನೇ ಕೋವಿಡ್ ಉಲ್ಬಣಗೊಳ್ಳತ್ತಿದೆ. ಸಾಂಕ್ರಾಮಿಕ ರೋಗದ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಜನತಾ ಕರ್ಫ್ಯೂ ಘೋಷಣೆ ಮಾಡಿ ಇದೀಗ ಲಾಕ್ಡೌನ್ ಜಾರಿಗೊಳಿಸಿದೆ. ಪರಿಣಾಮ, ಕೊಪ್ಪಳ ಜಿಲ್ಲೆಯಲ್ಲಿಯೂ ಅನೇಕ ಉದ್ಯಮಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದ್ದು, ಪೌಲ್ಟ್ರಿ ಉದ್ಯಮ ಮತ್ತು ಕಾರ್ಮಿಕರಿಗೂ ತೊಂದರೆಯಾಗಿದೆ.
ಕೊರೊನಾ ಕರ್ಫ್ಯೂ ಹಾಗೂ ಲಾಕ್ಡೌನ್ ಜಾರಿ ಮಾಡಿದ ಹಿನ್ನೆಲೆಯಲ್ಲಿ ಅನೇಕ ವ್ಯಾಪಾರ- ವಹಿವಾಟುಗಳು ಸ್ಥಗಿತಗೊಂಡಿವೆ. ರೆಸ್ಟೋರೆಂಟ್ಗಳು, ಹೋಟೆಲ್ಗಳು ಹಾಗೂ ಮಾಂಸಾಹಾರಿ ಖಾನಾವಳಿಗಳು ಬಂದ್ ಆಗಿವೆ. ಇದರ ಪರಿಣಾಮ ಪೌಲ್ಟ್ರಿ ಉದ್ಯಮದ ಮೇಲೂ ಬೀರಿದೆ. ಕೋಳಿ ಹಾಗೂ ಮೊಟ್ಟೆಯ ವ್ಯಾಪಾರದಲ್ಲಿ ಬಹಳಷ್ಟು ಕುಂಠಿತವಾಗಿದೆ.
ಜಿಲ್ಲೆಯಲ್ಲಿ ಮಾಂಸ ಮತ್ತು ಮೊಟ್ಟೆ ಉತ್ಪಾದನೆಯ ಸುಮಾರು 30 ಪೌಲ್ಟ್ರಿ ಫಾರ್ಮ್ಗಳಿವೆ. ನೂರಾರು ಕಾರ್ಮಿಕರು ಇಲ್ಲಿ ಕೆಲಸ ಮಾಡುತ್ತಿದ್ದಾರೆ. ಆದ್ರೆ ಕೊರೊನಾ ಎರಡನೇ ಅಲೆ ಕೋಳಿ ಹಾಗೂ ಮೊಟ್ಟೆ ವ್ಯವಹಾರದ ಮೇಲೆ ಪರಿಣಾಮ ಬೀರಿದೆ. ಕಳೆದ ತಿಂಗಳು ಒಂದು ಮೊಟ್ಟೆ ಬೆಲೆ 5 ರೂಪಾಯಿ ಇತ್ತು. ಈಗ 4 ರೂಪಾಯಿಗೆ ಒಂದರಂತೆ ಮೊಟ್ಟೆ ದರವಿದೆ. ಮೊಟ್ಟೆ ಹಾಗೂ ಕೋಳಿ ಸಾಗಾಣಿಕೆಗೆ ಅವಕಾಶವಿದ್ದರೂ ಸಹ ಶೇಕಡಾ 30 ರಷ್ಟು ಪ್ರಮಾಣದ ವ್ಯವಹಾರ ಕಡಿಮೆಯಾಗಿದೆ ಎನ್ನುತ್ತಾರೆ ಪೌಲ್ಟ್ರಿ ಫಾರ್ಮ್ ಉದ್ಯಮಿಗಳು.
ಇನ್ನು ಕೊರೊನಾ ಕರ್ಫ್ಯೂ ಹಾಗೂ ಲಾಕ್ಡೌನ್ನಿಂದ ಕಾರ್ಮಿಕರ ಸಮಸ್ಯೆಯೂ ಎದುರಾಗಿದೆ. ಬೇರೆ ಬೇರೆ ಗ್ರಾಮಗಳಿಂದ ಪೌಲ್ಟ್ರಿ ಫಾರ್ಮ್ ಕೆಲಸಕ್ಕೆ ಕಾರ್ಮಿಕರು ಬರುತ್ತಾರೆ. ಈಗ ಲಾಕ್ಡೌನ್ ಇರುವುದರಿಂದ ಕಾರ್ಮಿಕರು ಬರುವುದಕ್ಕೆ ಅಡ್ಡಿಯಾಗುತ್ತಿದೆ.
ಇದನ್ನೂ ಓದಿ: ಗಡಿಜಿಲ್ಲೆಯಿಂದ ಸೋಂಕಿತರ ಆಗಮನ: ಗಂಗಾವತಿಯಲ್ಲಿ ಬೆಡ್ಗಳ ಕೊರತೆ
ಕಾರ್ಮಿಕರು ಬರದಿರುವುದರಿಂದ ಪೌಲ್ಟ್ರಿ ಫಾರ್ಮ್ನ ನಿತ್ಯದ ಕೆಲಸಗಳು ನಿಂತು ಹೋಗುತ್ತಿದ್ದು, ಮೊಟ್ಟೆಗಳು ಹಾಳಾಗುತ್ತಿವೆ. ಒಟ್ಟಾರೆಯಾಗಿ ಕೊರೊನಾ ಎರಡನೇ ಅಲೆಯ ಕರ್ಫ್ಯೂ, ಲಾಕ್ಡೌನ್ ಅನೇಕ ಉದ್ಯಮ ಹಾಗೂ ವಹಿವಾಟಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ.